ಶಾಸಕ-ಸಚಿವರ ನಡುವೆ ಜಟಾಪಟಿ | ಹಾರಿಕೆ ಉತ್ತರದ ವಿರುದ್ಧ ಆಕ್ರೋಶ
`ತುರ್ತು ಸನ್ನಿವೇಶದಲ್ಲಿ ಅಗತ್ಯವಿರುವ ಅಗ್ನಿಶಾಮಕ ವಾಹನ ಹಾಳಾಗಿ ವರ್ಷ ಕಳೆದರೂ ಸರ್ಕಾರ ಸ್ಪಂದಿಸುತ್ತಿಲ್ಲ’ ಎಂದು ಶಾಸಕ ದಿನಕರ ಶೆಟ್ಟಿ ಅಧಿವೇಶನದಲ್ಲಿ ಆಕ್ರೋಶವ್ಯಕ್ತಪಡಿಸಿದರು. `ಕುಮಟಾ ಮತ್ತು ಹೊನ್ನಾವರದಲ್ಲಿ ಅಗ್ನಿಶಾಮಕ ವಾಹನ ಸಂಪೂರ್ಣ ಶಿಥಿಲಾ ವ್ಯವಸ್ಥೆಯಲ್ಲಿದೆ. ಅಗ್ನಿಶಾಮಕ ವಾಹನ ಇಲ್ಲದಿದ್ದರೆ ಆಗುವ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಅರಿವಿಲ್ಲವೇ?’ ಎಂದು ಖಾರವಾಗಿ ಪ್ರಶ್ನಿಸಿದರು.
`ಈ ಬಗ್ಗೆ ನಾನು ಪತ್ರ ಬರೆದಾಗ ಕೇಂದ ಸರ್ಕಾರದ ಮಾರ್ಗಸೂಚಿ ಪ್ರಕಾರ ಪುನಃ ರಸ್ತೆ ಚಾಲನೆಗೆ ಅನುಮತಿ ನೀಡಲು ಮತ್ತು ಹೊಸ ವಾಹನ ಖರೀದಿಗೆ ಅನುದಾನ ಕೇಳಲಾಗಿದೆ ಎಂಬ ಉತ್ತರ ಬಂದಿದೆ. ಅದರ ಜೊತೆ ವಿವಿಧ ಮಾದರಿಯ ವಾಹನ ಖರೀದಿಸಲು ಕ್ರಿಯಾ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿ ಟೆಂಡರ್ ಕರೆದಿರುವ ಬಗ್ಗೆಯೂ ಉಲ್ಲೇಖಿಸಲಾಗಿದೆ. ಈ ಉತ್ತರ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ’ ಎಂದರು.
ಇದಕ್ಕೆ ಉತ್ತರಿಸಿದ ಗೃಹ ಸಚಿವ ಜಿ ಪರಮೇಶ್ವರ್ `15 ವರ್ಷ ಹಳೆಯದಾದ ವಾಹನವನ್ನು ನಿರುಪಯುಕ್ತಗೊಳಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಇನ್ನು ಕೆಲ ವರ್ಷ ಅದೇ ವಾಹನ ಓಡಿಸಲು ಅನುಮತಿ ಕೋರಿದ್ದೇವೆ. ನಮ್ಮ ರಾಜ್ಯದಲ್ಲಿ ಸಾವಿರಾರು ವಾಹನ ಬದಲಾವಣೆ ಆಗಬೇಕಿದ್ದು, ರಾಜ್ಯದ ಹಣ ಬಳಸಿಕೊಂಡು 200 ಪೊಲೀಸ್ ವಾಹನಕ್ಕೆ ಟೆಂಡರ್ ಕರೆಯಲಾಗಿದೆ. ಅದರಂತೆ ಅಗ್ನಿಶಾಮಕ ವಾಹನಕ್ಕೂ ಮೂರು ಹಂತದಲ್ಲಿ ಬದಲಾವಣೆ ಮಾಡಲು ಕ್ರಮ ಜರುಗಿಸಲಾಗುತ್ತಿದೆ. ಇದಕ್ಕೆ 175 ಕೋಟಿ ರೂ ಹಣ ಅಗತ್ಯವಿದ್ದು, ಅನುದಾನ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಬರೆಯಲಾಗಿದೆ. ಅಗ್ನಿಶಾಮಕ ವಾಹನ ತಯಾರಿಸುವ ಕಂಪನಿ ಸಂಖ್ಯೆ ಕಡಿಮೆಯಿದ್ದು, ಟೆಂಡರ್ ಕರೆದ ನಂತರ ವಾಹನ ಪೂರೈಸಲು 2 ವರ್ಷ ಅಗತ್ಯ. ಈಗ ಉತ್ಪಾದಿಸಿ ನಾಳೆ ಕೊಡಲು ಸಾಧ್ಯವಿಲ್ಲ’ ಎಂದು ಹಾರಿಕೆ ಉತ್ತರ ನೀಡಿ ಸಿಟ್ಟಾದರು.
ಹಣ ದೋಚುವ ಹೈವೆ ಪೆಟ್ರೋಲ್!
ಗೃಹ ಸಚಿವರ ಉತ್ತರದಿಂದ ಸಮಾಧಾನಗೊಳ್ಳದ ದಿನಕರ ಶೆಟ್ಟಿ `ಕುಮಟಾದಲ್ಲಿ ಈಗಿರುವ ವಾಹನ ಪ್ರಯೋಜನಕ್ಕಿಲ್ಲ. ಇದರೊಂದಿಗೆ ತಾಲೂಕಿಗೆ ನೀಡಲಾದ `ಹೈವೆ ಪೆಟ್ರೋಲ್’ನಿಂದ ಯಾವುದೇ ಉಪಯೋಗವಿಲ್ಲ. ಹೈವೆ ಪೆಟ್ರೋಲ್ ಹಣ ದೋಚುವ ವಾಹನವಾಗಿದ್ದು, ಅದನ್ನು ಮರಳಿಪಡೆದು ಅಗ್ನಿಶಾಮಕವಾಹನ ನೀಡಿ’ ಎಂದು ಪಟ್ಟುಹಿಡಿದರು. `2 ವರ್ಷಗಳ ಕಾಲ ಕಾಯಲು ಸಾಧ್ಯವಿಲ್ಲ. ಬೇರೆ ತಾಲೂಕಿನಲ್ಲಿ ಹೆಚ್ಚುವರಿಯಾಗಿರುವ ವಾಹನವನ್ನಾದರೂ ಕುಮಟಾಗೆ ಕೊಡಬೇಕು’ ಎಂದು ಆಗ್ರಹಿಸಿದರು.
ಅಗ್ನಿಶಾಮಕ ವಾಹನಕ್ಕಾಗಿ ಶಾಸಕ ದಿನಕರ ಶೆಟ್ಟಿ ಪಟ್ಟುಹಿಡಿದ ವಿಡಿಯೋ ಇಲ್ಲಿ ನೋಡಿ..

Leave a comment