ಮತ್ತೀಘಟ್ಟ ಊರಿಗೆ ಹಿಂದೆ ಯಾಣವನ್ನೂ ಸೇರಿಸಿ ಯಾಣಮತ್ತೀಘಟ್ಟ ಎಂದೇ ಕರೆಯುತ್ತಿದ್ದರು. ಇವೆರಡೂ ಊರುಗಳಿಗೂ ಆಧುನಿಕತೆಯ ಬೆಳಕು ಹರಿಯುವ ಮುನ್ನವೇ ಧಾರ್ಮಿಕ, ಸಾಂಸ್ಕೃತಿಕ, ಸಾಂಘಿಕ ವಾತಾವರಣ ಜಾಗ್ರತವಾಗಿತ್ತು. ಮಳೆಗಾಲ ನಾಲ್ಕು ತಿಂಗಳು ಸೂರ್ಯನ ಬೆಳಕನ್ನೂ ಕಾಣದ ಪ್ರದೇಶಗಳಲ್ಲಿ ಇಡೀ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಅಂಥಹ ಸಾಂಸ್ಕೃತಿಕ ಕೇಂದ್ರಕ್ಕೆ ಪ್ರಮುಖ ರೂವಾರಿ ಶಿರಸಿಯ ಮತ್ತಿಘಟ್ಟದ ಗಣಪತಿ ವಿಶ್ವೇಶ್ವರ ಹೆಗಡೆ ಸಭಾಹಿತ.
ಮತ್ತೀಘಟ್ಟದ ಸಭಾಹಿತರ ಮನೆ ಸಮೃದ್ಧ ಕೃಷಿ ಬದುಕಿನ ದಶಭುಜ ಗಣಪತಿ ದೇವಸ್ಥಾನ ಹೊಂದಿದ ಧಾರ್ಮಿಕ ಕೂಡು ಕುಟುಂಬ. 1950ರಲ್ಲಿ ಈ ಕುಟುಂಬದಲ್ಲಿ ಹುಟ್ಟಿದ ಗಣಪತಿ ಹೆಗಡೆಯವರಿಗೆ ಕೃಷಿ, ಧಾರ್ಮಿಕತೆಯ ಜೊತೆ ಕಲೆಯ ಮೇಲೆ ವಿಪರೀತ ಮೋಹ. ಮಹಾಗಣಪತಿ ಯುವಕ ಮಂಡಳಿ ಆಗ ವರ್ಷಕ್ಕೊಂದು ಸಾಮಾಜಿಕ ನಾಟಕವಾಡುತ್ತಿತ್ತು. ಊರಿನ ಯುವಕರೇ ಕಲಾವಿದರು. ಬಾಡದ ಶಂಕರ್ ಮಾಸ್ತರ ನಿರ್ದೇಶನದಲ್ಲಿ ಅಣ್ಣ-ತಂಗಿ ನಾಟಕದಲ್ಲಿ ಗಣಪಯ್ಯ ಹೆಗಡೆಯವರು ಅತ್ತಿಗೆಯ ಪಾತ್ರ ಮಾಡಿ ತುಂಬಾ ಪ್ರಶಂಸೆಗೆ ಪಾತ್ರರಾದರು. ಆಗ ಊರಿನ ಹಿರಿಯ ಯಕ್ಷಗಾನ ಕಲಾವಿದರು ಅನೇಕರು.. `ನಿನಗೆ ಸ್ತ್ರೀ ವೇಷ ತುಂಬಾ ಚೆನ್ನಾಗಿ ಒಪ್ಪುತ್ತದೆ. ನೀನ್ಯಾಕೆ ಯಕ್ಷಗಾನ ಕಲಿತು ವೇಷಮಾಡಬಾರದು….ಅದರಲ್ಲೇ ನಿನಗೆ ಉನ್ನತಿಯಿದೆ’ ಎಂದು ಹರಸಿದರು. ಇದೇ ನಾಟಕ ಮಂಡಳಿಯ ಸಹಪಾಠಿಗಳೆಲ್ಲ ಸೇರಿ ಯಕ್ಷಗಾನ ಕಲಿಯುವುದೆಂದು ನಿರ್ಧರಿಸಿ ಊರಕೇರಿ ಸುಬ್ರಾಯ ಭಾಗವತರನ್ನೂ, ಧರ್ಮಶಾಲೆ ಮಹಾಬಲೇಶ್ವರ ಭಟ್ಟರನ್ನೂ ಊರಿಗೆ ಕರೆಸಿಕೊಂಡು ತರಗತಿ ಪ್ರಾರಂಭವಾಯಿತು.
ಗ್ರಾಮದೇವತೆ ರಾಮಲಿಂಗೇಶ್ವರ… ತನ್ನ ಚಂದ್ರಶಾಲೆಯಲ್ಲಿ ಅಭ್ಯಾಸ ಮಾಡುವ ಇವರನ್ನೆಲ್ಲ ಹರಸಿದ. ಒಂದೂವರೆ ತಿಂಗಳು ಕಲಿತು ಯೋಗಿನೀ ಕಲ್ಯಾಣ ಪ್ರಸಂಗ ಪ್ರದರ್ಶನ. ಗಣಪಯ್ಯನ ಪಾರ್ವತಿ, ಗೋಪಿಮನೆ ಸುಬ್ರಹ್ಮಣ್ಯ ಭಟ್ಟರ ಬಲರಾಮ, ಬೆದೆಗದ್ದೆ ಸತ್ಯನಾರಾಯಣ ಕೃಷ್ಣ…. ಮನೆ ಮಾತಾದವು. ಹೀಗೆ ಊರಿನ ಹಳೇಯ ಮೇಳವಾದ ಶ್ರೀ ರಾಮಲಿಂಗೇಶ್ವರ ಮೇಳದಲ್ಲಿ ವರ್ಷಕ್ಕೆ ಹತ್ತಿಪ್ಪತ್ತು ಆಟವಾಗುತ್ತಿತ್ತು. ಗಣಪಯ್ಯ ಹೆಗಡೆಯವರ ಮನಸ್ಸು ಸೀಮೋಲ್ಲಂಘನ ಮಾಡಲು ಆಶಿಸಿತ್ತು. ಎಲ್ಲ ಕಲಾವಿದರಂತೆ ಇವರೂ ಸಹ ಗುಂಡಬಾಳದ ದೇವರ ಸನ್ನಿಧಿಗೆ ಹೋಗಿ ಸೇರಿದರು. ಅಲ್ಲಿ ಮೂರು ವರ್ಷ ವೇಷ ಮಾಡಿ ಅನುಭವ ಸಂಪಾದನೆಯಾಯಿತು. ಅನೇಕ ಮಹಾನ್ ಕಲಾವಿದರ ಒಡನಾಟ ಸಿಕ್ಕಿತು. ನಂತರ ಒಂದು ವರ್ಷ ಅಮೃತೇಶ್ವರಿ ಮೇಳದಲ್ಲಿ ವೇಷಮಾಡಿ ಘಟ್ಟಿತನ ಪಡೆದಾಯಿತು. ಅದೇ ಮಳೆಗಾಲದಲ್ಲಿ ಕೆರೆಮನೆ ಮಹಾಬಲ ಹೆಗಡೆಯವರ ಬಳಿ ಹೋಗಿ ಕಿರುಹೆಜ್ಜೆಗಳನ್ನು ಕಲಿತು ಮರಳುವಾಗ `ನೀನು ಮುಂದಿನ ತಿರುಗಾಟಕ್ಕೆ ನಮ್ಮ ಮೇಳಕ್ಕೇ ಬಾ’ ಎಂದು ಬೀಳ್ಕೊಟ್ಟರು.
ಕೆರೆಮನೆ ಮೇಳ ಸೇರಿದ ಮೇಲೆ ದಿಗ್ಗಜ ಕಲಾವಿದರ ಸಂಗಮವೇ ಅಲ್ಲಿತ್ತು. ಐದು ವರ್ಷ ಕಳೆದ ಮೇಲೆ ಸಾಲ್ಕಣಿಯ ಗಡೀಮನೆ ಮೇಳದವರು ತಮ್ಮಲ್ಲಿ ಪ್ರಧಾನ ಸ್ತ್ರೀ ವೇಷಕ್ಕೆ `ನೀನೇ ಬೇಕು’ ಒತ್ತಾಯಿಸಿದಾಗ ಅಲ್ಲಿ ಸೇರಿ ಪ್ರಸಿದ್ದಿ ಪಡೆದಾಯಿತು. ಹೊಸ್ತೋಟ ಮಂಜುನಾಥ ಭಾಗವತರಿಂದ ಅರ್ಥಗಾರಿಕೆ,ಅಭಿನಯ ರಂಗತAತ್ರದ ಬಗ್ಗೆ ಅನುಭವ ಸಿಕ್ಕಿತು. 1975ರಲ್ಲಿ ಅಚವೆ ಊರಿನಲ್ಲಿ ಯಕ್ಷಗಾನ ತರಗತಿ ಮಾಡಿ ಶಿಕ್ಷಕ ವೃತ್ತಿಯನ್ನೂ ಮಾಡಿದ್ದಾಯಿತು.
1992 ನೇ ವರ್ಷ ಆರೋಗ್ಯ ಸಮಸ್ಯೆ ಕಾಡತೊಡಗಿತು. ಬೆನ್ನು ನೋವು ನಿತ್ಯದ ಸಂಗತಿಯಾಯಿತು. ರಂಗಸ್ಥಳಕ್ಕೆ ಅನಿವಾರ್ಯವಾಗಿ ಕೈ ಮುಗಿಯಬೇಕಾಯಿತು. ಈಗ ಗಣಪಯ್ಯ ಹೆಗಡೆಯವರು ಊರ ತರುಣರ ಜೊತೆ ತಾಳಮದ್ದಲೆಯಲ್ಲಿ ಭಾಗವಹಿಸುತ್ತಾರೆ. ಚುಟುಕು ಮಾತಿನ ಭಾವಸಹಿತವಾದ ಪಾತ್ರ ನಿರ್ವಹಣೆ ಅವರದ್ದು.
ಮೊಮ್ಮಕ್ಕಳೊಂದಿಗೆ ಯಕ್ಷಗಾನದ ವಿಶ್ರಾಂತ ಜೀವನ ಅವರದ್ದು. ಹಾಗೆಂದು ಕೃಷಿ ಕೆಲಸದಿಂದ ವಿಶ್ರಾಂತಿ ಬಯಸುವರಲ್ಲ. ಮಕ್ಕಳು ಬೈದರೂ ಸರಿಯೇ… ಅಂಡಿಗೆ ಕತ್ತಿಕೊಕ್ಕೆ ಕಟ್ಟಿ ತೋಟ, ಗದ್ದೆ ಸುತ್ತಾಡಿ ಕಣ್ಣಿಗೆ ಕಂಡ ಕೆಲಸ ಮಾಡಿದರೇ ಸಮಾಧಾನ. ಹಣ, ಹೆಸರು, ಪದವಿ, ಪ್ರಶಸ್ತಿ ಯಾವುದನ್ನೂ ಬಯಸದೇ ಯಕ್ಷಗಾನದ ತುಡಿತಕ್ಕಾಗಿ ತಮ್ಮನ್ನು ಸವೆಸಿಕೊಂಡ ಇಂತಹ ಕಲಾವಿದರಿಂದ ಕಲೆ ಬೆಳೆದಿದೆ, ಉಳಿದಿದೆ. ಇವರಿಗೆಲ್ಲ ನಾವು ಕೃತಜ್ಞತೆ ಸಲ್ಲಿಸಲೇ ಬೇಕು.
– ಶ್ರೀನಿವಾಸ ಭಾಗವತ ಮತ್ತೀಘಟ್ಟ
Discussion about this post