ಶಿರಸಿ: ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಅನುಷ್ಟಾನಕ್ಕೆ ಸಂಬoಧಿಸಿ ಆರನೇ ಕರಡು ಅಧಿಸೂಚನೆ ಪ್ರಕಟಿಸಿದ್ದು, ರಾಜ್ಯ ಸರ್ಕಾರ ಯಥಾವತ್ತಾಗಿ ಇದನ್ನು ಒಪ್ಪಿದರೆ ಲಕ್ಷಾಂತರ ಅರಣ್ಯವಾಸಿ ಕುಟುಂಬಗಳು ಅತಂತ್ರರಾಗಲಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವುದಕ್ಕಾಗಿ ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಬೆಂಗಳೂರಿಗೆ ಧಾವಿಸಿದ್ದಾರೆ.
ರಾಜ್ಯದ 10 ಜಿಲ್ಲೆಯ 1531 ಗ್ರಾಮಗಳಲ್ಲಿ ಸುಮಾರು 2 ಲಕ್ಷದಷ್ಟು ಅರಣ್ಯವಾಸಿ ಕುಟುಂಬಗಳಿವೆ. ಅರಣ್ಯ ಭೂಮಿಯನ್ನು ಆಶ್ರಯಿಸಿ ಅವರು ಬದುಕುತ್ತಿದ್ದು, ಅವರ ಅರ್ಜಿಗಳೆಲ್ಲವೂ ಪುನರ್ ಪರಿಶೀಲನಾ ಹಂತದಲ್ಲಿದೆ. ಪ್ರಸ್ತುತ ಕಸ್ತೂರಿ ರಂಗನ್ ವರದಿ ಯಥಾವತ್ತಾಗಿ ಜಾರಿಯಾದರೆ ಈ ಜನರಿಗೆ ಅಲ್ಲಿ ಜೀವಿಸುವ ಹಕ್ಕು ಸಹ ಇರುವುದಿಲ್ಲ.
ಅದರಲ್ಲಿಯೂ ಉತ್ತರ ಕನ್ನಡ ಜಿಲ್ಲೆಯಲ್ಲಿ 80 ಸಾವಿರದಷ್ಟು ಜನ ಅರಣ್ಯ ಭೂಮಿ ಆಶ್ರಯಿಸಿದ್ದು, ಈ ಜಿಲ್ಲೆ ಸಹ ಪರಿಸರ ಸೂಕ್ಷ್ಮ ಎಂದು ಘೋಷಣೆ ಆದರೆ ಎಲ್ಲರನ್ನು ಒಕ್ಕಲೆಬ್ಬಿಸುತ್ತಾರೆ. ಇದರಿಂದ ಜಿಲ್ಲೆಯ ಬಹುತೇಕ ಜನ ನಿರಾಶ್ರಿತರಾಗಲಿದ್ದಾರೆ. ಹೀಗಾಗಿ ಇದನ್ನು ಕೂಡಲೇ ತಡೆಯಬೇಕು ಎಂದು ರವೀಂದ್ರ ನಾಯ್ಕ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದಾರೆ.
ಬಡವರ ಬದುಕಿಗೆ ಕಾಡುವ ಕಸ್ತೂರಿ ಗುಮ್ಮ: ಅರಣ್ಯವಾಸಿಗಳಿಗೆ ಮತ್ತೆ ಆತಂಕ!

Leave a comment