ಕಾಳಿ ಸೇತುವೆ ದುರಂತಕ್ಕೆ ಸಾವಿರಾರು ಜನ ಸಾಕ್ಷಿಯಾದರೂ ಹೆದ್ದಾರಿ ಗುತ್ತಿಗೆ ಕಂಪನಿ ವಿರುದ್ಧ ದೂರು ನೀಡಿದ್ದು ಮಾತ್ರ ಅವಘಡದಿಂದ ನದಿ ಪಾಲಾದ ಲಾರಿ ಚಾಲಕ!
ಕಾಳಿ ನದಿ ಸೇತುವೆ ಕುಸಿತಕ್ಕೆ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಸ್ವತ: ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ. ಸ್ಥಳೀಯ ಶಾಸಕ ಸತೀಶ್ ಸೈಲ್ ಸಹ ಅದೇ ಮಾತನ್ನು ಪುನರುಚ್ಚರಿಸಿದ್ದಾರೆ. ಸೇತುವೆ ಕುಸಿದ ಪರಿಣಾಮ ನಿತ್ಯ ಲಕ್ಷಾಂತರ ಜನರ ಓಡಾಟಕ್ಕೆ ಸಮಸ್ಯೆಯಾಗಿದೆ. ಸ್ಥಳೀಯ ಮೀನುಗಾರರು ಸೇರಿ ಸಾವಿರಾರು ಕುಟುಂಬಗಳಿಗೆ ಪರೋಕ್ಷವಾಗಿ ಈ ಸೇತುವೆ ಕುಸಿತ ಪರಿಣಾಮ ಬೀರಲಿದೆ. ಆದರೆ, ಈ ಬಗ್ಗೆ ಯಾರೂ ಧ್ವನಿ ಎತ್ತಿಲ್ಲ. ಸಾರ್ವಜನಿಕ ಆಸ್ತಿ ಹಾಳು ಮಾಡಿದ ಬಗ್ಗೆ ಪ್ರತಿಭಟನೆಯನ್ನು ನಡೆಸಿಲ್ಲ.
ಸೇತುವೆ ಕುಸಿತದ ವೇಳೆ ಲಾರಿಯಲ್ಲಿದ್ದು, ಲಾರಿಸಹಿತ ನದಿಗೆ ಬಿದ್ದು ಜೀವ ಉಳಿಸಿಕೊಂಡ ಚಾಲಕ ಬಾಳ ಮುರುಗನ್ ಕೇಂದ್ರ ಸಚಿವರ ಅಧೀನದಲ್ಲಿರುವ ಕಂಪನಿ ವಿರುದ್ಧ ದೂರು ನೀಡಿದ್ದಾರೆ. ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಚಾಲಕನಿಗೆ ಜಿಲ್ಲಾಡಳಿತ 50 ಸಾವಿರ ರೂ ಪರಿಹಾರ ನೀಡಿದೆ. ಈ ಪರಿಹಾರದ ನೂರುಪಟ್ಟು ಹಣ ಐ ಆರ್ ಬಿ ವಿರುದ್ಧದ ಸಮಗ್ರ ಹೋರಾಟಕ್ಕೆ ಬೇಕಿದೆ. ಅದರಲ್ಲಿಯೂ ಈಗಾಗಲೇ ಗಾಯಗೊಂಡು ಆಸ್ಪತ್ರೆ ಸೇರಿರುವ ಕೇರಳದ ಬಾಲ ಮುರುಗನ್ ಈ ಪ್ರಕರಣದ ತನಿಖೆ ಹಾಗೂ ವಾದಕ್ಕಾಗಿ ಓಡಾಟ ನಡೆಸಲಿದ್ದಾರೆಯೇ? ಎಂಬುದು ಎಲ್ಲರ ಪ್ರಶ್ನೆ? ಒಬ್ಬ ಲಾರಿ ಚಾಲಕನಿಂದ ಅಷ್ಟು ದೊಡ್ಡ ಕಂಪನಿ ವಿರುದ್ಧ ಹೋರಾಡಿ ಸಾರ್ವಜನಿಕ ನ್ಯಾಯ ಕೊಡಿಸಲು ಸಾಧ್ಯವೇ? ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ.






Discussion about this post