ಕಾರವಾರದ ಕಾಳಿ ಸೇತುವೆ ಕುಸಿತದ ಬೆನ್ನಲ್ಲೇ ಇದೀಗ ಶಿರಸಿ-ಯಲ್ಲಾಪುರ ಸಂಪರ್ಕ ಕೊಂಡಿಯಾದ ಬೇಡ್ತಿ ಸೇತುವೆ ಎಷ್ಟು ಸುರಕ್ಷಿತ? ಎಂಬ ಪ್ರಶ್ನೆ ಉದ್ಬವಿಸಿದೆ. ಕಾರಣ ಈ ಹಳೆಯ ಬೇಡ್ತಿ ಸೇತುವೆ ಸಹ ಕಾಳಿ ಸೇತುವೆಯಷ್ಟೇ ಹಳೆಯದು!
2020 ಹಾಗೂ ನಂತರದ ಅವಧಿಯಲ್ಲಿ ಬೇಡ್ತಿ ಸೇತುವೆ ಮೇಲೆ ನೀರು ಉಕ್ಕಿ ಹರಿದಿತ್ತು. ಅದಕ್ಕೂ ಮುನ್ನವೇ ಹಳೆಯ ಬೇಡ್ತಿ ಸೇತುವೆಗೆ ಬಿರುಕು ಮೂಡಿದ್ದು ಸಹ ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಗಿತ್ತು. ಅನೇಕ ಸಂಘ-ಸoಸ್ಥೆಗಳು ಹೊಸ ಸೇತುವೆ ನಿರ್ಮಿಸುವಂತೆ ಮೊದಲೇ ಆಗ್ರಹಿಸಿದ್ದರು. ಅದರ ಪರಿಣಾಮವಾಗಿ ಬದಲಿ ಸೇತುವೆ ನಿರ್ಮಾಣವಾಗಿದ್ದು 2021ರಲ್ಲಿ ಹೊಸ ಸೇತುವೆಯಲ್ಲಿ ಸಹ ಬಿರುಕು ಕಾಣಿಸಿಕೊಂಡಿತ್ತು.
ಈ ಎಲ್ಲದರ ನಡುವೆ ನದಿಯಲ್ಲಿ ಹರಿದು ಬಂದ ದೊಡ್ಡ ದೊಡ್ಡ ಮರದ ತುಂಡುಗಳು ಸೇತುವೆಯ ಪಿಲ್ಲರ್’ಗೆ ಅಪ್ಪಳಿಸುತ್ತಿವೆ. ಪ್ರತಿ ವರ್ಷ ಕಟ್ಟಿಗೆ ಹಾಗೂ ಕಸ ಸೇತುವೆಯ ಬುಡಕ್ಕೆ ಬಡಿದು ಇಡೀ ಸೇತುವೆಯನ್ನು ಅಲ್ಲಾಡಿಸುತ್ತಿದೆ. ಅಲ್ಲಿನ ಕಟ್ಟಿಗೆ ತೆಗೆಯುವವರು ಯಾರು? ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ.
ಬೇಡ್ತಿ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸಿದ ನಂತರವೂ ಹಳೆ ಸೇತುವೆ ಹಾಗೇ ಇದೆ. ಅನೇಕರು ಅದರ ಮೇಲೆ ನಿಂತು ಮೀನು ಹಿಡಿಯುತ್ತಾರೆ. ಸೆಲ್ಪಿ ಹುಚ್ಚಿಗೆ ಹಳೆ ಸೇತುವೆ ಮೇಲೆ ಸರ್ಕಸ್ ಮಾಡುವವರ ಸಂಖ್ಯೆ ಕಡಿಮೆ ಏನಿಲ್ಲ. ಬೇರೆ ಬೇರೆ ಪ್ರದೇಶದಿಂದ ಬಂದವರು ಹಳೆಯ ಸೇತುವೆ ಮೇಲೆ ವಾಹನ ಓಡಿಸುವುದು, ಅಲ್ಲಿ ಗಾಡಿ ನಿಲ್ಲಿಸುವುದು ಸಾಮಾನ್ಯವಾಗಿದೆ. ಈ ಎಲ್ಲಾ ಕಾರಣದಿಂದ ಹಳೆಯ ಸೇತುವೆ ಇನ್ನಷ್ಟು ಭಯ ಹುಟ್ಟಿಸುವ ಹಾಗಿದ್ದು ಯಾವುದೇ ಸುರಕ್ಷತೆ ಇಲ್ಲಿಲ್ಲ.
`ಶಿಥಿಲಗೊಂಡಿರುವ ಸೇತುವೆ ಮೇಲೆ ಸಂಚಾರ ನಿಷೇಧಿಸಬೇಕು. ಅಪಾಯ ತಗ್ಗಿಸಲು ಅಗತ್ಯವಿರುವ ಕ್ರಮ ಜರುಗಿಸಬೇಕು’ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಉಪಾಧ್ಯಕ್ಷ ನರಸಿಂಹ ಸಾತೊಡ್ಡಿ ತಾಲೂಕಾಡಳಿತಕ್ಕೆ ಆಗ್ರಹಿಸಿದ್ದಾರೆ.
Discussion about this post