ಕಲೆಯ ಕುರಿತಾದ ಸೆಳೆತದಿಂದ ತಾಳಮದ್ದಲೆಯ ಅರ್ಥಧಾರಿಯಾಗಿ ರಂಗ ಪ್ರವೇಶಿಸಿ, ಯಕ್ಷಗಾನ ವೇಷಗಳನ್ನೂ ಮಾಡಿ ನಾಟಕದಿಂದಲೂ ಪ್ರಸಿದ್ಧರಾದವರು ಅಪರೂಪದ ವ್ಯಕ್ತಿ ಅರ್ಲಹೊಂಡದ ಗಣಪತಿ ನಾಯ್ಕ.
ಐದು ದಶಕಗಳ ಸಾರ್ಥಕ ಕಲಾಸೇವೆ ಮಾಡಿದ ಅವರು ಓದಿದ್ದು ಐದನೇ ತರಗತಿ. ಚಿಕ್ಕವಯಸ್ಸಿನಿಂದಲೂ ಯಕ್ಷಗಾನ ಮೇಲಿದ್ದ ಆಸಕ್ತಿಯಿಂದ ಖ್ಯಾತ ಅರ್ಥಧಾರಿ ಬಾಳಂತನಪಾಲ ನಾರಾಯಣ ಗಾಂವ್ಕಾರರ ಮಾರ್ಗದರ್ಶನದಲ್ಲಿ ತಾಳಮದ್ದಳೆಯಲ್ಲಿ ಅರ್ಥಹೇಳಲು ಪ್ರಾರಂಭಿಸಿದರು. ಅದಮ್ಯ ಉತ್ಸಾಹ ಮತ್ತು ಕಲಿಕಾಸಕ್ತಿಗೆ ಸರಿಯಾಗಿ ಅನುಭವಿಕರ ಒಡನಾಟ, ಮಾರ್ಗದರ್ಶನ, ಪ್ರೋತ್ಸಾಹ ದೊರೆತ ಕಾರಣ ಅವಕಾಶಗಳು ಅರೆಸಿಬಂದವು. ಆ ಅವಕಾಶಗಳ ಮೂಲಕ ಉತ್ತಮ ಅರ್ಥಧಾರಿಯಾಗಿ ಗುರುತಿಸಿಕೊಂಡರು.
ವೃಷಪರ್ವ, ಭೀಮ, ಸಾಲ್ವ, ಪರಶುರಾಮ, ಮಾರೀಚ, ರಾವಣ ಮುಂತಾದವುಗಳು ಅವರು ತಾಳಮದ್ದಳೆಗಳಲ್ಲಿ ಹೆಚ್ಚು ನಿರ್ವಹಿಸಿದ ಪಾತ್ರಗಳು. ತಾಳಮದ್ದಳೆ ಕೂಟಗಳೊಟ್ಟಿಗೆ ವೇಷಧಾರಿಯಾಗಿ ಊರಿನ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದ ಗಣಪತಿಯವರು ಹೆಚ್ಚಿನ ಅನುಭವ ಸಂಪಾದನೆಗಾಗಿ ಗುಂಡಬಾಳ, ಹಾಲಾಡಿ ಮುಂತಾದ ಮೇಳಗಳಲ್ಲಿ ತಿರುಗಾಟವನ್ನೂ ಮಾಡಿದರು. ಶನಿ, ಪ್ರತಾಪಸೇನ, ಸುಗ್ರೀವ ಹೀಗೆ ಹಲವಾರು ಪಾತ್ರಗಳನ್ನು ಯಕ್ಷಗಾನದಲ್ಲಿ ಪರಿಣಾಕಾರಿಯಾಗಿ ಅವರು ನಿರ್ವಹಿಸಿದ್ದಾರೆ.
ಯಕ್ಷಗಾನ ಹಾಗೆ ನಾಟಕರಂಗದಲ್ಲೂ ಇವರ ಸೇವೆ ಗುರುತರವಾದದ್ದು. ನಾಟಕಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡದ್ದು ಖಳ ನಾಯಕನಾಗಿ. ಸದ್ಯ 72ರ ಪ್ರಾಯದಲ್ಲೂ ಕುಂದದ ಕಲಾಸಕ್ತಿ, ಅಧ್ಯಯನ ನಿರಂತರವಾಗಿದೆ.
– ಕರ್ನಾಟಕ ಕಲಾ ಸನ್ನಿಧಿ, ತೇಲಂಗಾರ




Discussion about this post