ಕಳೆದ 25 ವರ್ಷಗಳಿಂದ ಭಾರತದ ಸೈನಿಕರ ರಕ್ಷಣೆಗಾಗಿ ಶಿರಸಿಯ ಸೋಂದಾ (Sondha) ಸ್ವರ್ಣವಲ್ಲಿ ಸಂಸ್ಥಾನದಲ್ಲಿ ತುಳಸಿ ಅರ್ಚನೆ ನಡೆಯುತ್ತಿದೆ. ಪ್ರತಿ ವರ್ಷ ಕೃಷ್ಣ ಜನ್ಮಾಷ್ಟಮಿ ದಿನದಂದು ಸೈನಿಕರ ರಕ್ಷಣೆಗಾಗಿ ಇಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ.
1999ರ ಸಾಲಿನಲ್ಲಿ ಕಾರ್ಗಿಲ್ ಯುದ್ಧ ನಡೆಯುತ್ತಿದ್ದಾಗ ಸ್ವರ್ಣವಲ್ಲಿ ಮಹಾಸಂಸ್ಥಾನದ ಗಂಗಾಧರೇ0ದ್ರ ಸರಸ್ವತಿ ಸ್ವಾಮೀಜಿ ಭಾರತೀಯ ಸೈನಿಕರ ರಕ್ಷಣೆಗಾಗಿ ವಿಶೇಷ ತುಳಸಿ ಅರ್ಚನೆ ಮಾಡಿದರು. ಅದಾದ ನಂತರ ಪ್ರತಿ ವರ್ಷವೂ ಈ ಸೇವೆ ನಡೆದುಕೊಂಡು ಬಂದಿದ್ದು, ದೇಶಕ್ಕೆ ಯಾವುದೇ ಆಪತ್ತು ಬಾರದಂತೆ ಈ ವೇಳೆ ದೇವರಲ್ಲಿ ಪ್ರಾರ್ಥಿಸಲಾಗುತ್ತದೆ. ಅಂದಿನಿOದ ಇಂದಿನವರೆಗೂ ಸ್ವತ: ಶ್ರೀಗಳೇ ಈ ತುಳಸಿ ಪೂಜೆ ಮಾಡುತ್ತ ಬಂದಿದ್ದಾರೆ.
ಕಾರ್ಗಿಲ್ ಯುದ್ಧಕ್ಕೆ 25ನೇ ವರ್ಷ ತುಂಬುತ್ತಿರುವ ಈ ವೇಳೆ ಈ ವರ್ಷದ ತುಳಸಿ ಅರ್ಚನೆ ವಿಶೇಷವೆನಿಸಿದೆ. 1999ರಲ್ಲಿ ಶ್ರೀಗಳು ಸಂಕಲ್ಪಿಸಿದ0ತೆ ಈವರೆಗೂ ಅರ್ಚನೆ ಮುಂದುವರೆಸಿಕೊ0ಡು ಬಂದಿರುವುದು ಅಪರೂಪದಲ್ಲಿಯೇ ಅಪರೂಪ. ಪ್ರತಿ ವರ್ಷ ನಿಗದಿತ ದಿನ, ನಿಗದಿತ ಸ್ಥಳ ಹಾಗೂ ನಿಗದಿತ ಸಮಯದಲ್ಲಿ ವಿಶೇಷ ಅರ್ಚನೆ ನಡೆಯುತ್ತಿರುವುದು ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನದಲ್ಲಿ ಮಾತ್ರ.
ಈ ವಿಷಯ ಭಾರತೀಯ ಸೇನೆಗೆ ಅರಿವಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ಹಿಂದೆ ವಿಶೇಷ ಪೂಜೆ ನಡೆದಾಗ ಭಾರತೀಯ ಸೈನ್ಯಕ್ಕೆ ಸೋಂದಾ ಸಂಸ್ಥಾನದ ಪ್ರಸಾದ ರವಾನೆಯಾಗಿದ್ದು, ಕಾರ್ಗಿಲ್ ವಿಜಯಕ್ಕೆ 25 ವರ್ಷ ಸಂದಿದ ಹಿನ್ನಲೆ ಭಾರತೀಯ ಸೇನೆಯವರು ಒಮ್ಮೆ ಕೃಷ್ಣ ಜನ್ಮಾಷ್ಟಮಿಗೆ ಸೋಂದಾಗೆ ಆಗಮಿಸಿ ಪ್ರಸಾದ ಸ್ವೀಕರಿಸಿದರೆ ಸಾರ್ಥಕ. ಆಗ, ಈ 25 ವರ್ಷಗಳ ಕಾಲ ಸೈನಿಕರ ಹೆಸರಿನಲ್ಲಿ ನಡೆದ ಅರ್ಚನೆಗೂ ಕೃತಜ್ಞತೆ ಸಲ್ಲಿಸಿದ ಹಾಗಾಗುತ್ತದೆ.
– ಡಾ ರವಿಕಿರಣ ಪಟವರ್ಧನ
ಆಯುರ್ವೇದ ವೈದ್ಯ, ಶಿರಸಿ
Discussion about this post