1998ರ ಅವಧಿಯಲ್ಲಿಯೇ ಅಮೆರಿಕಾದಲ್ಲಿ ಸತ್ಯನಾರಾಯಣ ದೇವಾಲಯ ( Temple ) ನಿರ್ಮಿಸಿದ್ದ ಉಡುಪಿಯ ಸೂರಾಲು ವೆಂಕಟ್ರಮಣ ಭಟ್ಟ ತಮ್ಮ ಪತ್ನಿ ರತ್ನಾ ಟಿ ಎನ್ ಅವರ ಜೊತೆಯಾಗಿ ಯಲ್ಲಾಪುರದ ದತ್ತಮಂದಿರಕ್ಕಾಗಿ ಹಲವು ವಿಶೇಷಗಳನ್ನು ಹೊಂದಿದ ದತ್ತಾತ್ರೇಯ ಮೂರ್ತಿ ರಚಿಸುವ ಸಿದ್ಧತೆ ಮಾಡಿಕೊಂಡಿದ್ದಾರೆ. ಮೂರ್ತಿ ರಚನೆ ಮಾತ್ರವಲ್ಲದೇ ಇಡೀ ದೇವಾಲಯದ ವಿನ್ಯಾಸ ಸಹ ಅವರ ಜವಾಬ್ದಾರಿಯಲ್ಲಿದೆ.
ಕಳೆದ 45 ವರ್ಷಗಳಿಂದ ಶಿಲ್ಪ ಕಲೆಯಲ್ಲಿ ಪರಿಣಿತಿ ಹೊಂದಿರುವ ಈ ದಂಪತಿ ಈವರೆಗೆ 20 ದೇವಾಲಯಗಳ ನಿರ್ಮಾಣ ಮಾಡಿದ್ದಾರೆ. 3 ಸಾವಿರಕ್ಕೂ ಅಧಿಕ ಗಣಪತಿ ವಿಗ್ರಹಗಳನ್ನು ರಚಿಸಿದ್ದು, ಅದೇ ಪ್ರಮಾಣದಲ್ಲಿ ಇತರೆ ದೇವಾನುದೇವತೆಗಳ ಮೂರ್ತಿಯನ್ನು ಶಿಲೆಯಲ್ಲಿ ಕೆತ್ತಿದ್ದಾರೆ. 750 ವರ್ಷಗಳ ನಂತರ ಹೊಯ್ಸಳ ಶೈಲಿಯಲ್ಲಿ ಬೆಂಗಳೂರಿನ ಕನಕಪುರದಲ್ಲಿ ಗಣಪತಿ ದೇವಾಲಯ ನಿರ್ಮಿಸಿದ ಹಿರಿಮೆ ಅವರದ್ದು. 1998ರಲ್ಲಿ ಅಮೇರಿಕಾದಲ್ಲಿ ಸತ್ಯನಾರಾಯಣ ದೇವಾಲಯ ನಿರ್ಮಿಸಿದ ಅವರು ನಂತರ ಆ ಭಾಗದಲ್ಲಿ ವಿಷ್ಣು ದೇವಸ್ಥಾನ ಹಾಗೂ ವೆಂಕಟೇಶ್ವರ ದೇವಾಲಯವನ್ನು ಕಟ್ಟಿಕೊಟ್ಟಿದ್ದಾರೆ. ಜೊತೆಗೆ ಅಲ್ಲಿನ ದೇವಾಲಯವೊಂದಕ್ಕೆ ಆರು ಅಡಿಯ ಆಂಜಿನೇಯ ವಿಗ್ರಹವನ್ನು ನಿರ್ಮಿಸಿಕೊಟ್ಟಿದ್ದಾರೆ.

ಪ್ರಸ್ತುತ ನಾಯ್ಕನಕೆರೆಯ ದತ್ತ ಮಂದಿರ ಮೂರ್ತಿ ನಿರ್ಮಾಣಕ್ಕೆ ನಂಜನಗೂಡಿನ ಕೃಷ್ಣಶಿಲೆಯನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ. `ದತ್ತಮಂದಿರದಲ್ಲಿ ಗೋಸಹಿತ ನಿಂತಿರುವ ದತ್ತಾತ್ರೇಯ ವಿಗ್ರಹ ಪ್ರತಿಷ್ಠಾಪನೆಯಾಗಲಿದೆ. ಈ ವಿಗ್ರಹ ಬ್ರಹ್ಮ ವಿಷ್ಣು ಮಹೇಶ್ವರರನ್ನು ಪ್ರತಿನಿಧಿಸುವ ಮೂರು ಮುಖ ಹಾಗೂ ಆರು ಕೈಗಳನ್ನು ಹೊಂದಿರುತ್ತದೆ. ಆಯಾಯ ದೇವತೆಗಳನ್ನು ಬಿಂಬಿಸುವ ಆಯುಧಗಳಿರುತ್ತವೆ. ಪೀಠದಲ್ಲಿ ನಾಲ್ಕು ವೇದದ ಪ್ರತಿನಿಧಿಯಾಗಿ ಶ್ವಾನದ ಬಿಂಬವನ್ನು ಕೆತ್ತನೆ ಮಾಡಲಾಗುತ್ತದೆ’ ಎಂದವರು ಮಾಹಿತಿ ನೀಡಿದರು.
`ಕದಂಬರ ಕಾಲದಿಂದಲೂ ನಂಜನಗೂಡು ಹಾಗೂ ಅದರ ಆಸುಪಾಸಿನ ಕಲ್ಲುಗಳಿಂದ ಮೂರ್ತಿ ಕೆತ್ತನೆ ನಡೆಯುತ್ತಿದೆ. ಅಯೋಧ್ಯೆ ರಾಮನನ್ನು ನಿರ್ಮಿಸಿದ ಕಲ್ಲು ಸಹ ಇದೇ ಪ್ರದೇಶಕ್ಕೆ ಸೇರಿದ್ದಾಗಿದ್ದು, ಮೊದಲು ಮೆತ್ತಗಿದ್ದು ನಂತರ ಗಡಸಾಗುವುದು ಈ ಕಲ್ಲಿನ ವಿಶೇಷಗಳಲ್ಲಿ ಒಂದು’ ಎಂದವರು ವಿವರಿಸಿದರು. ಸದ್ಯ ಗುಡಿ ನಿರ್ಮಾಣಕ್ಕೆ 9 ಜನ ಶ್ರಮಿಸುತ್ತಿದ್ದಾರೆ. ಈ ವರ್ಷದ ದತ್ತ ಜಯಂತಿಯ ಒಳಗೆ ಪೂರ್ತಿ ಕೆಲಸ ಮುಗಿಸಿಕೊಡುವುದಾಗಿ ರಾಮಚಂದ್ರಾಪುರ ರಾಘವೇಶ್ವರ ಶ್ರೀಗಳಿಗೆ ಮಾತು ನೀಡಿದ್ದೇನೆ’ ಎಂದವರು ಹೇಳಿದರು.
ದತ್ತಮಂದಿರ ವಾಸ್ತು ವಿಶೇಷ ಕುರಿತಾದ ಲೇಖನ ಇಲ್ಲಿ ಓದಿ..
Temple | ದೇವಾನುದೇವತೆಗಳ ಪುಣ್ಯಭೂಮಿ ನಾಯ್ಕನಕೆರೆ: ದಿವ್ಯ ಪರಿಸರದಲ್ಲಿ ಭವ್ಯ ದತ್ತ ಮಂದಿರ!
Discussion about this post