ಪದ್ಯ – ಪಾತ್ರ – ಪ್ರಸಂಗ ನಡೆಗಳ ಕುರಿತು ಸ್ಪಷ್ಟವಾದ ತಿಳುವಳಿಕೆ, ಅಧ್ಯಯನದಲ್ಲಿ ಆಸಕ್ತಿ, ಶುದ್ಧವಾದ ಭಾಷೆ, ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲ ಅರ್ಹತೆ, ಪದ್ಯದ ಭಾವಕ್ಕೆ ಹೆಚ್ಚು ಮಹತ್ವ ನೀಡಿದ ಅಚ್ಚುಕಟ್ಟಾದ ಅರ್ಥಗಾರಿಕೆಯ ಪ್ರಸ್ತುತಿಯ ಕಾರಣ ಕಲಾಸಕ್ತರಿಂದ ಉತ್ತಮ ( Yakshagana ) ತಾಳಮದ್ದಳೆ ಅರ್ಥಧಾರಿ ಕುಂಬ್ರಿಕೊಟ್ಟಿಗೆ ಆರ್.ವಿ ಹೆಗಡೆಯವರು.
ಯಲ್ಲಾಪುರ ತಾಲೂಕು ಹೊನಗದ್ದೆಯವರಾದ ಅವರು ಓದಿದ್ದು ಪಿಯುಸಿ. ತಾಳಮದ್ದಲೆ ಅರ್ಥ ಹೇಳಲು ಶುರು ಮಾಡಿದ್ದು ತಮ್ಮ 26ನೇ ವಯಸ್ಸಿನಲ್ಲಿ. ಇಡಗುಂದಿ ರಾಮಲಿಂಗೇಶ್ವರ ದೇವಳದಲ್ಲಿ ನಡೆಯುತ್ತಿದ್ದ ತಾಳಮದ್ದಳೆಗಳಲ್ಲಿ ಅವರಿಗೆ ಅವಕಾಶ ಸಿಕ್ಕಿದ್ದು, ಈರಾಪುರ ಕಳಚೆ ಭಾಗದ ಉತ್ಸಾಹಿ ಕಲಾವಿದರ ಕೂಡುವಿಕೆಯ `ತ್ರಯಂಬಕೇಶ್ವರ ಯಕ್ಷಗಾನ ಮಂಡಳಿ’ಯವರು ಆಯೋಜಿಸಿದ್ದ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಯಲ್ಲಾಪುರದ ವಿವಿಧ ಭಾಗಗಳಲ್ಲಿ ಜರುಗುತ್ತಿದ್ದ ತಾಳಮದ್ದಳೆ ಕೂಟಗಳಲ್ಲಿ ಹಿರಿಕಿರಿಯ ಎಲ್ಲಾ ಅರ್ಥಧಾರಿಗಳೊಡನೆ ಅವರು ಬೆರೆತು ಅನುಭವ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಕಲ್ಮನೆ(ಶಿವ ಗುರೂಜಿ) ವಿ.ಎಸ್ ಭಟ್ ಅಬ್ಬಿತೋಟ, ಭಾಸ್ಕರ ಭಟ್, ಮಂಜುನಾಥ ಭಟ್ ಮೊದಲಾದ ಕಲಾಸಕ್ತ ಉತ್ಸಾಹಿ ಶಿಕ್ಷಕರ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಯಕ್ಷಪಂಚಮಿ ತಾಳಮದ್ದಳೆ ಕೂಟದಲ್ಲಿ ಪ್ರಧಾನ ಅರ್ಥಧಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಕರ್ಣ, ಶಲ್ಯ, ಸುಭದ್ರೆ, ಲಕ್ಷ್ಮಣ, ಸುಗ್ರೀವ, ಹನುಮಂತ, ದೇವಯಾನಿ, ಕೃಷ್ಣ, ಮೋಹಿನಿ ಹೀಗೆ ಅನೇಕ ಬಗೆಯ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ತಾಳಮದ್ದಳೆಯೊಟ್ಟಿಗೆ ಯಕ್ಷಗಾನ, ನಾಟಕಗಳಿಗೆ ಸಹ ಅವರ ಕೊಡುಗೆ ಅಪಾರ. ಕಳೆದ 24 ವರ್ಷಗಳಿಂದ ಅವರು ಕಲಾ ಸೇವೆಯಲ್ಲಿದ್ದಾರೆ.
ಜೀವನ ನಿರ್ವಹಣೆಗೆ ಆಧಾರವಾದ ಕೃಷಿಯಂತೆ ಕಲೆ ಕೂಡ ಆರ್.ವಿ ಹೆಗಡೆ ಅವರಿಗೆ ಹಿಂದಿನ ತಲೆಮಾರಿನವರಿಂದ ಸಿಕ್ಕಿದ್ದು. ಅವರ ಅಜ್ಜ ಮತ್ತು ತಂದೆ ಸಹ ಪ್ರಸಿದ್ಧ ಕಲಾವಿರಾಗಿ ಮೆರೆದವರು. ಮನೆ ಮತ್ತು ಊರಿನಲ್ಲಿದ್ದ ದಟ್ಟವಾದ ಯಕ್ಷಗಾನ ವಾತಾವರಣದ ಜೊತೆಗೆ ಸಮರ್ಥ ಅರ್ಥಧಾರಿ ಬಾಳಂತನಪಾಲ ನಾರಾಯಣ ಗಾಂವ್ಕಾರರ ಪ್ರಭಾವದಿಂದ ತಾಳಮದ್ದಳೆಗಳಲ್ಲಿ ತೊಡಗಿಸಿಕೊಂಡವರಿವರು. ತಮ್ಮ ಅಧ್ಯಯನ ಬಲದಿಂದ ಉತ್ತಮ ಅರ್ಥಧಾರಿಯಾಗಿ ರೂಪುಗೊಳ್ಳುವುದರೊಂದಿಗೆ ತಮ್ಮ ಸರಳತೆ ಸಜ್ಜನಿಕೆಯಿಂದಲೂ ಎಲ್ಲರ ಪ್ರೀತಿ ಪಡೆದಿದ್ದಾರೆ.
– ಕರ್ನಾಟಕ ಕಲಾ ಸನ್ನಿಧಿ, ತೇಲಂಗಾರ
Discussion about this post