ಸೊಳ್ಳೆ ಕಾಟವನ್ನು ಖಂಡಿತವಾಗಿಯೂ ಯಾರೂ ಇಷ್ಟಪಡುವುದಿಲ್ಲ. ಅದರೊಂದಿಗೆ ಕಿವಿ ಬಳಿ ಬಂದು ಇದು ಹಾಡುವ ಕರ್ಕಶ ಸಂಗೀತ ಕೇಳಿ ಸಿಟ್ಟು ನೆತ್ತಿಗೇರುವವರೇ ಜಾಸ್ತಿ. ಇದರಿಂದ ಬರುವ ರೋಗ ಕೂಡಾ ಅಷ್ಟೇ ಅಪಾಯಕಾರಿ!
ಅಂಕಿ ಅಂಶಗಳ ಪ್ರಕಾರ ಪ್ರತಿ ವರ್ಷ ಸುಮಾರು 4,35,000 ಜನರು ಮಲೇರಿಯಾದಿಂದ ಸಾಯುತ್ತಾರೆ. ಇದು ಮಾತ್ರವಲ್ಲದೆ ಪ್ರಪಂಚದಾದ್ಯoತ ಪ್ರತಿ ವರ್ಷ ಸುಮಾರು 219 ಮಿಲಿಯನ್ ಮಲೇರಿಯಾ ಪ್ರಕರಣಗಳು ವರದಿಯಾಗುತ್ತದೆ. ಸುಮಾರು 100 ದೇಶಗಳಲ್ಲಿ ಮಲೇರಿಯಾ ಪ್ರಕರಣ ವರದಿಯಾಗುತ್ತದೆ. ಸಾಮಾನ್ಯವಾಗಿ ಇದು ಪ್ರಪಂಚದ ಉಷ್ಣವಲಯದ ಪ್ರದೇಶಗಳ ಮೇಲೆ ಪರಿಣಾಮ ಬೀರುವ ಸ್ಥಿತಿಯಾಗಿದೆ.
ವಿಶ್ವ ಸೊಳ್ಳೆ ದಿನದ ಇತಿಹಾಸ
1897ರ ಅಗಸ್ಟ 20ರಂದು ಸರ್ ರೊನಾಲ್ಡ್ ರಾಸ್ ಎಂಬವರು ಅನಾಫಿಲಿಸ್ ಸೊಳ್ಳೆಯ ಹೊಟ್ಟೆಯ ಅಂಗಾoಶದಲ್ಲಿ ಮಲೇರಿಯಾ ಪರಾವಲಂಬಿಯನ್ನು ಕಂಡುಹಿಡಿದರು. ಈ ವಿನಾಶಕಾರಿ ಪರಾವಲಂಬಿಯನ್ನು ಮನುಷ್ಯರಿಂದ ಮನುಷ್ಯನಿಗೆ ಸಾಗಿಸುವ ವಾಹಕ ಸೊಳ್ಳೆಗಳು ಎಂದು ಅವರ ಸಂಶೋಧನೆ ದೃಢಪಡಿಸಿತು. ಮಲೇರಿಯಾ ಸೊಳ್ಳೆಗಳ ಮೂಲಕ ಹರಡುವ ರೋಗವಾಗಿದ್ದು, ಇದು ಪರಾವಲಂಬಿಯಿoದ ಉಂಟಾಗುತ್ತದೆ. ಇದು ಗುಣಪಡಿಸಬಹುದಾದ ಮತ್ತು ತಡೆಗಟ್ಟಬಹುದಾದ ರೋಗವೇ. ಆದರೆ, ಇದು ಇನ್ನೂ ಜಗತ್ತಿನಾದ್ಯಂತ ಲಕ್ಷಾಂತರ ಜನರ ಜೀವಕ್ಕೆ ಅಪಾಯ ತಂದಿಡುತ್ತದೆ. ಇಲ್ಲಿ ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಎಲ್ಲಾ ಸೊಳ್ಳೆಗಳು ಮಲೇರಿಯಾ ಹರಡುವುದಿಲ್ಲ. ಸೋಂಕಿತ ಹೆಣ್ಣು ಅನಾಫಿಲಿಸ್ ಸೊಳ್ಳೆ ಮಾತ್ರ ಈ ಸಾಂಕ್ರಾಮಿಕ ರೋಗವನ್ನು ಮನುಷ್ಯರಿಗೆ ಹರಡುತ್ತವೆ.
ಹುಲಿ ಸಿಂಹಗಳಿಗಿoತ ಅಪಾಯಕಾರಿ:
ಕ್ರೂರ ಪ್ರಾಣಿಗಳಾದ ಹುಲಿ, ಸಿಂಹ, ಚಿರತೆಗಳಿಗಿಂತ ಸೊಳ್ಳೆ ಹೆಚ್ಚು ಅಪಾಯಕಾರಿ. ಅದರಲ್ಲೂ ಹೆಣ್ಣು ಸೊಳ್ಳೆಗಳು ಮತ್ತಷ್ಟು ಕೆಟ್ಟವು. ವಿಶ್ವದಲ್ಲಿ ಇದುವರೆಗೂ ಸುಮಾರು ನಾಲ್ಕುವರೆ ಕೋಟಿ ಜನರು ಸೊಳ್ಳೆ ಕಡಿತದಿಂದ ಉಂಟಾದ ವಿವಿಧ ರೋಗಗಳಿಗೆ ಬಲಿಯಾಗಿದ್ದಾರೆ. ಇಂದಿಗೂ ವಿಶ್ವದಲ್ಲಿ ಪ್ರತಿ ಹನ್ನೆರಡು ಸೆಕೆಂಡುಗಳಿಗೆ ಒಬ್ಬ ವ್ಯಕ್ತಿ ಸೊಳ್ಳೆಯಿಂದ ಸಾಯುತ್ತಿದ್ದಾನೆ. ಭೂಮಿಯ ಮೇಲಿನ ಇತರ ಯಾವುದೇ ಪ್ರಾಣಿಗಳ ಕಾಟದಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಮನುಷ್ಯರು ಸಾವಿಗೀಡಾಗಿಲ್ಲ. ಮಲೇರಿಯಾ, ಹಳದಿ ಜ್ವರ, ಡೆಂಘಿ, ಎನ್ಸಾಫಲಿಟಿಸ್ (ಮೆದುಳಿನ ಉರಿಯೂತ), ಆನೆ ಕಾಲು ರೋಗ ಸೇರಿದಂತೆ ನೂರಕ್ಕೂ ಹೆಚ್ಚು ಮಾರಕ ರೋಗಗಳನ್ನು ಈ ಹೆಣ್ಣು ಸೊಳ್ಳೆಗಳು ಒಬ್ಬರಿಂದ ಒಬ್ಬರಿಗೆ ಹರಡುತ್ತಾ ಸಾವಿಗೆ ಕಾರಣವಾಗುತ್ತವೆ.
ಸೊಳ್ಳೆಯ ಇಂಗ್ಲಿಷ್ ಹೆಸರಾದ `ಮಸ್ಕಿಟೊ’ ಪದದ ಮೂಲ ಸ್ಪ್ಯಾನಿಷ್. ಸ್ಪ್ಯಾನಿಷ್‌ನಲ್ಲಿ ಇದರ ಮೂಲ ಅರ್ಥ `ಚಿಕ್ಕ ಕೀಟ’. 10ರಿಂದ 50 ಮೀಟರ್ ದೂರದಿಂದ ಮನುಷ್ಯನ ಉಸಿರಾಟವನ್ನು ಸೊಳ್ಳೆಗಳು ಗುರುತಿಸಬಲ್ಲವು. 5-10 ಮೀಟರ್ ವ್ಯಾಪ್ತಿಯಲ್ಲಿ ಮನುಷ್ಯನನ್ನು ನೋಡಬಲ್ಲವು. 20 ಸೆಂ.ಮೀಟರ್ ವ್ಯಾಪ್ತಿಯಲ್ಲಿ ಮನುಷ್ಯನ ದೇಹದ ಉಷ್ಣತೆ ಮತ್ತು ಬೆವರನ್ನು ಗ್ರಹಿಸಬಲ್ಲವು.
2000ನೇ ಇಸವಿಯಿಂದ ಸೊಳ್ಳೆಗಳ ವಿರುದ್ಧದ ಜಾಗತಿಕ ಹೋರಾಟದ ಮೂಲಕ, 7.6 ಮಿಲಿಯನ್ ಜೀವಗಳನ್ನು ಉಳಿಸಲಾಗಿದೆ. ಇದರೊಂದಿಗೆ 1.5 ಬಿಲಿಯನ್ ಮಲೇರಿಯಾ ಪ್ರಕರಣಗಳನ್ನು ಇಲ್ಲಿಯವರೆಗೆ ತಡೆಯಲಾಗಿದೆ. ಇದೇ ಉದ್ದೇಶಕ್ಕೆ ಸೊಳ್ಳೆಗಳಿಗೂ ಒಂದು ದಿನವನ್ನು ನಿಗದಿಪಡಿಸಿದ್ದು, ಅದರ ವಿರುದ್ಧ ಜಾಗೃತಿ ಮೂಡಿಸುವುದೇ ಈ ದಿನವನ್ನು ಗುರುತಿಸುವ ಉದ್ದೇಶ.
ಸೊಳ್ಳೆ ಕಚ್ಚಿದರೆ ಏನು ಮಾಡಬೇಕು?
– ತುರಿಕೆ ಮಾಡುವ ಪ್ರಚೋದನೆಯನ್ನು ತಪ್ಪಿಸಿ. ಏಕೆಂದರೆ ಇದು ಚರ್ಮದ ಸವೆತಕ್ಕೆ ಕಾರಣವಾಗಬಹುದು.
– ಸೋಂಕಿತ ಪ್ರದೇಶದ ಮೇಲೆ ಐಸ್ ಪ್ಯಾಕ್‌ಗಳನ್ನು ಇಡಿ. ಹಾಗಂತಾ ಆಗಾಗ ಇಡುತ್ತಿರಬೇಡಿ.
– ಕ್ಯಾಲಮೈನ್‌ನಂತಹ ಹಿತವಾದ ಲೋಷನ್ ಬಳಸಿ. ಇದು ತುರಿಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
– ಚರ್ಮದ ಸೋಂಕು ತೀವ್ರವಾಗಿದ್ದರೆ, ಆಂಟಿ ಅಲರ್ಜಿಗಳನ್ನು ಬಳಸಬಹುದು.
– ಸೋಪ್ ಮತ್ತು ನೀರಿನಿಂದ ಸೊಳ್ಳೆ ಕಚ್ಚಿದ ಜಾಗವನ್ನು ಸ್ವಚ್ಛಗೊಳಿಸಿ.
ಸೊಳ್ಳೆ ಕಡಿತವನ್ನು ತಡೆಯುವುದು ಹೇಗೆ?
ವಾಹಕಗಳಿಂದ ಹರಡುವ ರೋಗವನ್ನು ತಡೆಗಟ್ಟಲು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು.
– ದೇಹದ ಮೇಲೆ ಕೀಟ ನಿವಾರಕವನ್ನು ಹಚ್ಚಿ. ಬಟ್ಟೆ ಅಥವಾ ಹಾಸಿಗೆ ಮೇಲೂ ಹಾಕಬಹುದಾದ ಕೆಲವು ಸ್ಪ್ರೇಗಳಿವೆ.
– ಗಾಢ ಬಣ್ಣದ(ಡಾರ್ಕ್ ಕಲರ್) ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ. ಇವುಗಳಿಗೆ ಹೆಚ್ಚು ಸೊಳ್ಳೆಗಳು ಆಕರ್ಷಿತವಾಗುತ್ತದೆ.
– ಸೊಳ್ಳೆ ಪರದೆಗಳನ್ನು ಮನೆ ಅಥವಾ ಕಚೇರಿಗಳಲ್ಲಿ ಹಾಕಿ. ಅಲ್ಲದೆ, ಹಾಸಿಗೆಯ ಸುತ್ತಲೂ ಬಲೆಗಳನ್ನು ಹಾಕಿ.
– ಮನೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಿ ಮತ್ತು ನೀರನ್ನು ಸಂಗ್ರಹಿಸುವುದನ್ನು ತಪ್ಪಿಸಿ. ಇದು ಈ ಕೀಟಗಳ ಸಂತಾನೋತ್ಪತ್ತಿ ಸ್ಥಳವಾಗಬಹುದು.
– ಮುಸ್ಸಂಜೆ ಸಮಯದಲ್ಲಿ ಮನೆಯಿಂದ ಹೊರಗೆ ಹೋಗುವುದನ್ನು ತಪ್ಪಿಸಿ.
– ಯಾವುದೇ ಸೊಳ್ಳೆ ಕಡಿತ ಮತ್ತು ಸೋಂಕಿನಿoದ ತಪ್ಪಿಸಿಕೊಳ್ಳುವ ಏಕೈಕ ಮಾರ್ಗವೆಂದರೆ ತಯಾರಿ ಮತ್ತು ತಡೆಗಟ್ಟುವಿಕೆ.
ಸೊಳ್ಳೆಗಳಿಂದ ಜಾಗೃತರಾಗಿರಿ.. ಸದಾ ಎಚ್ಚರವಾಗಿರಿ.
ಜನ ಜಾಗೃತಿ ಬರಹ: ಡಾ ರವಿಕಿರಣ ಪಟವರ್ಧನ, ಆಯುರ್ವೇದ ವೈದ್ಯ ಶಿರಸಿ
Discussion about this post