ಕಾನುಘಟ್ಟ ಬಹುಶಃ ಈ ಪುಸ್ತಕವನ್ನು ಓದದೆ ಹೋದರೆ ನಾವು ಕಳೆದುಕೊಳ್ಳುವ ಸಂಗತಿಗಳು ಹಲವಾರು. ಈ ಪುಸ್ತಕದ ಮುಖಪುಟದಲ್ಲಿರುವ ವನಕುಲಕೆ ಶರಣು ಎಂಬ ಸಾಲೊಂದೆ ಸಾಕು ಓದುಗರ ಮನದಲ್ಲಿ ಕಾಡಿನ ಬೃಹತ್ ಚಿತ್ರಣದ ಬಗ್ಗೆ ಪೂಜ್ಯ ಭಾವ ಬೆಳೆಯುವಂತೆ ಮಾಡುತ್ತದೆ.
ಈ ಪುಸ್ತಕ ಬರೆಯಲು ಶಿವನಾಂದ ಕಳವೆ ಅವರು ಅದೇಷ್ಟು ಮಾಹಿತಿಗಳನ್ನಾ ಕಲೆಹಾಕಿರಬಹುದು, ಅವರ ಪರಿಶ್ರಮವೇಷ್ಟಿರಬಹುದು ಅಂತ ಪುಸ್ತಕ ಓದುತ್ತಾ ಓದುತ್ತಾ ಅರಿವಾಗುತ್ತದೆ. ಉತ್ತರ ಕನ್ನಡದ ಅರಣ್ಯ ಸಂಪತ್ತಿನ ವರ್ಣನೆಯ ಜೊತೆಗೆ ಈ ಪುಸ್ತಕ ಓದುತ್ತಾ ಹೋದಂತೆ ಹಳೆಯ ಕಾಲದ ಜನಜೀವನ, ಕಾಡಿನಲ್ಲಿಕಟ್ಟಿಕೊಂಡ ಬದುಕು, ಮರಗಳ ಸಾಂಗತ್ಯ, ವನದೇವಿಯ ಪೂಜೆ, ಹುಲಿದೇವರ ಹೆಜ್ಜೆ ಗುರುತು, ಮಣ್ಣಿನ ಗೊಂಬೆಗಳು ರಾಮಪತ್ರೆ, ಸುರಗಿ, ರಂಜಲು ಹೂವಿನ ಗೊಂಚಲು, ಕಾಳಿ ನದಿಯ ಹರಿವು , ಕಪ್ಪೆಗಳು ತಿಳಿಸಿದ ವನದೇವಿಯ ಪಾಠ , ಉಳವಿಯ ಗುಹೆಗಳ ಪಿಸುಮಾತುಗಳು ಹೀಗೆ ನೂರಾರು ವಿಷಯಗಳು ಜೊತೆಯಾಗುತ್ತವೆ.
ಶರ್ಮಾಜಿ, ತಾರೀಕು ಭಟ್ಟರು, ಗೋಪಾಲ ಭಟ್ಟರು, ಕಾಳು, ಕತ್ತೆಸ್ವಾಮಿ,ನಾಗಪ್ಪಚ್ಚಿ, ಜ್ಯೋತಿ ಭಟ್ಟರು, ಗುಂದದ ವೈದ್ಯರು, ನರಸಿಂಹ ಹೀಗೆ ಅದೇಷ್ಟೋ ಪಾತ್ರಗಳು ಮಸ್ಸಿನಲ್ಲಿ ಅಚ್ಚಾಗಿ ಕೂತುಬಿಟ್ಟಿವೆ. ಬ್ರಿಟಿಷರು ನಮ್ಮ ಸಮೃದ್ಧವಾದ ಕಾಡನ್ನು ಕಡಿದು ತೇಗವನ್ನು
ಬೆಳೆಸಿದ ಕಥೆಯನ್ನು ಓದೋವಾಗ ಕಣ್ಣಲ್ಲಿ ನೀರು ಜಿನುಗುತ್ತದೆ. ಶರ್ಮಾಜಿಯ ಜೊತೆ ಕಾಡಿನ ದಾರಿಯಲ್ಲಿ ಹಳ್ಳಿಗಳ್ಳಿ ಓಡಾಡಿದಂತೆ ಭಾಸವಾಗುತ್ತೆ. ದೇವಿ ಮಹಾತ್ಮೆ ಕಣ್ಣೆದುರೆ ನಡೆಯುತ್ತಿರುವಂತೆ ಕಾಣಿಸುತ್ತದೆ. ತಾರೀಖು ಭಟ್ಟರ ಜೊತೆಗೆ ನಾವಿದ್ದು ಮಾತುಗಳನ್ನಾ ಕೇಳಿಸಿಕೊಂಡAತೆ ಅನಿಸುತ್ತದೆ. ಹೀಗೆ ನೂರಾರು ವಿಷಯಗಳು ಮನಸ್ಸಿನಾಳದಲ್ಲಿ ಇಳಿದು ನಮ್ಮ ಹಿಂದಿನ ಜನರ ಬದುಕು, ಅವರು ಪ್ರಕೃತಿಯಲ್ಲಿ ದೇವಿಯನ್ನು ಕಂಡುಕೊAಡ ಬಗೆ, ಅರಣ್ಯ ಸಂರಕ್ಷಣೆಯನ್ನಾ ಮಾಡಲು ವನದುರ್ಗೆಯನ್ನಾ ಪೂಜಿಸುತ್ತಿದ್ದ ಪರಿಪಾಠ, ಅಂದಿನ ಜನರಿಗಿದ್ದ ಅರಣ್ಯ ಜ್ಞಾನದ ಬಗ್ಗೆ ಅರಿವಾಗುತ್ತಿದ್ದ ಹಾಗೆ ಮನಸ್ಸು ಕಾಡಮ್ಮನನ್ನಾ ಕಣ್ತುಂಬಿಕೊಳ್ಳಲು ಬಯಸುತ್ತದೆ.
ನನ್ನೂರಿನ ಅದೇಷ್ಟೋ ತಾಣಗಳ ಬಗ್ಗೆ ನಾನು ಓಡಾಡಿದ ಹಲವಾರು ಜಾಗಗಳ ಬಗ್ಗೆ ಈ ಪುಸ್ತಕದಲ್ಲಿ ಓದಿ ನಿಬ್ಬೆರಗಾದೆ. ಈ ಪುಸ್ತಕವನ್ನು ಓದುತ್ತಾ ನನ್ನೊಳಗಿನ ಅದೇಷ್ಟೋ ನೆನಪುಗಳು ಸುರಳಿ ಬಿಚ್ಚಿಕೊಂಡವು.
ಚಿಕ್ಕ ವಯಸ್ಸಿನಲ್ಲಿ ಅಮ್ಮನ ಬಳಿ ಕೇಳಿದ್ದ ಗಾಮದ ಹಬ್ಬದ ವರ್ಣನೆ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಮನೆಯಿಂದ ಅಂದಾಜು ಐದು ಕಿಲೋಮೀಟರ್ ದೂರದಲ್ಲಿರುವ ಕೆಂಡಬಿರಬೈಲ್ ಅಲ್ಲಿ `ಗಾಮದ ಹಬ್ಬ ನಡಿತಿತ್ತು, ಸುತ್ತ ಮುತ್ತ ಊರಿನ ಜನ ಬರ್ತಿದ್ದ, ಕೆಂಡ ಹಾಯ್ತಿದ್ದ’ ಎಂಬ ಮಾತುಗಳ ಜೊತೆಗೆ ಕೊನೆಗೊಂದು ದಿನ `ಗಾಮದ ಹಬ್ಬ ನಿಂತೋತು ಇನ್ಯಾವತ್ತು ಗಾಮದ ಹಬ್ಬ ನೆಡಿತಿಲ್ಲೆ’ ಎಂದು ಅಮ್ಮ ಹೇಳಿದ ಮಾತುಗಳು ನೆನಪಾದವು. ನಾವು ಚಿಕ್ಕವರಿದ್ದಾಗ ಆಟವಾಡಲು ಕೆಂಡಬೀರಬೈಲಿಗೆ ಹೋಗ ಬೇಕಾದರೆ `ತಂಗಿ ಅಲ್ಲೊಂದು ಸಣ್ಣ ಕಾಲಿಗೆಲ್ಲಿ ನೀರು ಹರಿತು. ಅದ್ರ ದಾಟಿ ಹೋಗಡಿ. ಅಲ್ಲಿ ದೇವಿ ಇದ್ದು’ ಎಂದು ಅಮ್ಮಾ ಎಚ್ಚರಿಸುತ್ತಿದ್ದ ಮಾತುಗಳು ನೆನಪಾದವು. ಹಾಗೆ ನಮ್ಮೂರಿನಿಂದ ಸಾಕಷ್ಟು ಮೈಲಿ ದೂರದಲ್ಲಿ ನಡೆಯೋ ಕಾನಮ್ಮನೋರ ಮನೆ ಹಬ್ಬದ ಬಗ್ಗೆ ಓದಿದಾಗ ಮೈಮಸ್ಸುಗಳೆರಡು ಹಳೆಯ ದಿನಗಳ ನೆನಪಿನಲ್ಲಿ ಮುಳುಗಿಹೋಯಿತು. ಕಾನಮ್ಮನೋರ ಮನೆ ಹಬ್ಬ ಬಂತು ಅಂದ್ರೆ ಅದೇನೊ ಸಂಭ್ರಮ. ದಟ್ಟ ಕಾನಿನ ನಡುವೆ ದೇವಿ ಉದ್ಭವವಾದ ಜಾಗ ,ಅಲ್ಲಿ ಪ್ರತಿವರ್ಷ ನಡೆಯೋ ಪೂಜೆ, ಸಾವಿರಾರಕ್ಕು ಹೆಚ್ಚುಜನ ಸೇರಿ ಕಾನಮ್ಮನಿಗೆ ಕೈಮುಗಿಯುವ ದೃಶ್ಯ , ನಾವು ಮಕ್ಕಳೆಲ್ಲ ದೊಡ್ಡವರ ಜೊತೆ ಸೇರಿ ನಡೆದುಕೊಂಡು ಕಾನಮ್ಮನೋರ ಮನೆಗೆ ತಲುಪ್ತಿದ್ದ ಕ್ಷಣಗಳು ಕಣ್ಣಮುಂದೆ ಬಂದಿತು.
ಈಗಲೂ ಪ್ರತಿವರ್ಷ ಕಾನಮ್ಮನೋರ ಮನೆ ಹಬ್ಬ ನಡೆಯುತ್ತದೆ. ಆದರೆ ನನಗಲ್ಲಿಗೆ ಹೋಗೋಕಾಗ್ತಿಲ್ಲ ಅನ್ನೋ ಕೊರಗು ಪುಸ್ತಕ ಓದುತ್ತಿದ್ದ ಹಾಗೆ ತುಸು ಹೆಚ್ಚಾಗೆ ಕಾಡಿತು. ನಮ್ಮ ಮನೆಯ ತೋಟದಲ್ಲಿರುವ ಚೌಡಿ, ಬೊಮ್ಮಾಯ ದೇವರು, ದೀಪಾವಳಿಯಲ್ಲಿ ಪೂಜೆ ಸಲ್ಲಿಸೋ ಹುಲಿದೇವರ ಮನೆ, ಜಟಗಾ, ಬೊಮ್ಮಾಯ ದೇವರಿಂದಾಗಿ ಬೊಮ್ಮರಜಡ್ಡಿ ಎಂದು ಕರೆಯುವ ಸ್ಥಳ ಹೀಗೆ ನೂರಾರು ದೇವರುಗಳು ನೆನಪಾದವು.
ಮನುಷ್ಯರಾದ ನಾವು ಒಂದಿಷ್ಟು ವರ್ಷ ಬದುಕಿ ಬಾಳಲು ಭೂಮಿಗೆ ಬಂದವರು. ಆದರೆ, ನಾವೇ ಶಾಶ್ವತವಾಗಿ ಈ ಭೂಮಿಯ ಮೇಲೆ ಇರ್ತಿವಿ ಎಂಬ ಭೃಮೆಯಲ್ಲಿ ಎಲ್ಲಾ ಜಾಗವನ್ನು ಆಕ್ರಮಿಸಿಕೊಂಡು ಆರ್ಥಿಕ ಲಾಭಕ್ಕಾಗಿ ಗಿಡಮರಗಳನ್ನು ಕಡಿದು ವನಮಾತೆಯ ಸಂಪತ್ತನ್ನು ಲೂಟಿ ಮಾಡುತ್ತಿದ್ದೇವೆ. ನಾವು ಅಳಿದವರು ವನಮಾತೆ ಶಾಶ್ವತಳು ಅವಳು ಮುನಿದರೆ ಏನು ಬೇಕಾದ್ರು ಆಗಬಹುದು. ಈಗಾಗಲೇ ನಮ್ಮ ಅದೇಷ್ಟೋ ತಪ್ಪುಗಳಿಂದಾಗಿ ಅರಣ್ಯಗಳು ಬರಿದಾಗುತ್ತಿವೆ ಇನ್ನಷ್ಟು ತಪ್ಪುಗಳಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ. ಕಾನುಘಟ್ಟ ಓದಿದರೆ ನಾವೆಲ್ಲಿ ಎಡವುತ್ತಾ ಇದ್ದಿವಿ ಎಂಬ ಸ್ಪಷ್ಟ ಚಿತ್ರಣ ದೊರೆಯುವುದು. ಪುಸ್ತಕ ಓದಿ ಮುಗಿಸುವಾಗ ಮನಸ್ಸು ಭಾರವಾಗಿತ್ತು. ಇದು ಯಾವುದೋ ನೆಲದ ಕಥೆಯಲ್ಲಾ ನಮ್ಮದೇ ನೆಲದ ಕಥೆ. ಉತ್ತರ ಕನ್ನಡದ ಕಾಡಿನ ಒಳಹೊಕ್ಕು ವನಮಾತೆಯ ದರ್ಶನದ ಜೊತೆಗೆ ನಮಗೆ ತಿಳಿದಿಲ್ಲ. ಅದೇಷ್ಟೋ ವಿಷಯಗಳ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ಪುಸ್ತಕ ಎಂದರೆ ಅದು ಕಾನುಘಟ್ಟ.
ಪ್ರತಿಯೊಬ್ಬರೂ ಓದಲೇ ಬೇಕಾದ ಪುಸ್ತಕ. ಶಿವಾನಂದ ಕಳವೆ ಅವರ ಮಧ್ಯ ಘಟ್ಟವನ್ನು ಮೂರು ಬಾರಿ ಓದಿದ್ದ ನನಗೆ ಕಾನುಘಟ್ಟ ಬಹು ಇಷ್ಟವಾಯಿತು.
– ಮೇಘಾ ಸಂತೋಷ್
Discussion about this post