ಯಕ್ಷಗಾನ (Yakshagana) ಕಲಾವಿದರ ವೇಷಭೂಷಣಗಳನ್ನು ಹೊತ್ತು ಸಾಗಿಸುವ ಕೆಲಸ ಮಾಡುತ್ತಿದ್ದ ನಾರಾಯಣ ನಾಗೇಶ ಭಟ್ಟ ಆಕಸ್ಮಿಕವಾಗಿ ಯಕ್ಷಗಾನ ಪ್ರವೇಶಿಸಿದವರು. ಹಾಸ್ಯ ಕಲಾವಿದರು ಗೈರಾದಾಗ ಕೋಡಂಗಿ ಪಾತ್ರ ನಿಭಾಯಿಸಿದ ಅವರು ಪಡೆದ ಸಂಭಾವನೆ 1 ರೂ. ಅವರಿಗೆ ಒಮ್ಮೆ ಮಾತ್ರ ಕಿರಿಟ ಧರಿಸಿದಾಗ ದೊರೆತ ಸಂಭಾವನೆ 4 ರೂ!
ಯಕ್ಷಗಾನ (Yakshagana) ಪ್ರದರ್ಶನ ಯಶಸ್ಸಿನಲ್ಲಿ ಕಲಾವಿರ ಶ್ರಮದಷ್ಟೇ ಅವರ ಸಾಮಗ್ರಿಗಳನ್ನು ಸ್ಥಳಕ್ಕೆ ತಂದು ಮುಟ್ಟಿಸುವ ಹಾಗೂ ಅವರ ವೇಷಭೂಷಣ ನೋಡಿಕೊಳ್ಳುವವರ ಪಾತ್ರವೂ ಇದೆ. ವಾಹನ ವ್ಯವಸ್ಥೆಗಳೇ ಇಲ್ಲದ ಅವಧಿಯಲ್ಲಿ ನಾರಾಯಣ ನಾಗೇಶ ಭಟ್ಟರು ತಲೆಯ ಮೇಲೆ ಯಕ್ಷವೇಷ ಹೊತ್ತು ವೇದಿಕೆ ಹಿಂದೆ ಬರುತ್ತಿದ್ದರು. ಆದಾಯ, ಪ್ರಚಾರ, ಲಾಭ ಇಲ್ಲದೇ ತೆರೆ ಹಿಂದೆ ದುಡಿಯುತ್ತಿದ್ದ ಅವರು ಯಕ್ಷಗಾನ ಶುರುವಾದ ಕೂಡಲೇ ವೇದಿಕೆ ಮುಂದೆ ಬಂದು ಪ್ರೇಕ್ಷಕರಾಗುತ್ತಿದ್ದರು.
ಸಾಗರದ ನಾರಾಯಣ ನಾಗೇಶ ಭಟ್ಟ ಓದಿದ್ದು 2ನೇ ತರಗತಿ. ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ ನಿರಾಶ್ರಿತರಾಗಿ ಯಲ್ಲಾಪುರ ಭಾಗಕ್ಕೆ ಬಂದ ಅವರು ಅಣಲಗಾರ ಮೇಳದಲ್ಲಿ ವೇಷಭೂಷಣದ ಸಹಾಯಕರಾಗಿ ದುಡಿದರು. ಪೆಟ್ಟಿಗೆ ಹೊರುವ ಕೆಲಸವನ್ನು ಮಾಡುತ್ತಿದ್ದ ಅವರು ನಂತರ 12 ವರ್ಷಗಳ ಕಾಲ ಹಾಸ್ಯ ಕಲಾವಿದರಾಗಿ ಜನರನ್ನು ರಂಜಿಸಿದರು.
ಯಕ್ಷಗಾನದ (Yakshagana) ಕುರಿತಾದ ಅತೀವ ಆಸಕ್ತಿಯಿಂದ ತಮ್ಮ 31ನೇ ವಯಸ್ಸಿನಲ್ಲಿ ನಾರಾಯಣ ಭಟ್ಟರು ಶಿಂಬಳಗಾರಿನ ಸಣ್ಣಣ್ಣ ಭಾಗ್ವತರ ಸಹಕಾರದೊಂದಿಗೆ ಅಣಲಗಾರ ಮೇಳಕ್ಕೆ ವೇಷಭೂಷಣ ಸಹಾಯಕರಾದರು. ಸಮೇಳನದ ಮುಖ್ಯಸ್ಥರಾಗಿದ್ದ ಸಣ್ಣಣ್ಣ ಭಾಗ್ವತರು ತಮ್ಮ ಮನೆಯಲ್ಲಿ ನಾರಾಯಣ ಭಟ್ಟರಿಗೆ ಆಶ್ರಯ ನೀಡಿದ್ದರು.
ಆಟ ಇರುವಾಗ ವೇಷಭೂಷಣದ ಪೆಟ್ಟಿಗೆ ಹೋರುವುದು, ಚೌಕಿಯಲ್ಲಿ ಕಲಾವಿದರಿಗೆ ವೇಷ ಸಿದ್ಧತೆಗೆ ಸಹಕರಿಸುವುದು ಭಟ್ಟರ ಕೆಲಸ. ಆಟ ಶುರುವಾದ ನಂತರ ಆಸಕ್ತಿಯಿಂದ ಯಕ್ಷಗಾನ ನೋಡುವುದು ಅವರ ಹವ್ಯಾಸ. ಆಗಾಗ ಮೇಳದೊಂದಿಗೆ ತಿರುಗಾಟವಾದರೆ, ಆಟ ಇಲ್ಲದಿರುವಾಗ ಸಣ್ಣಣ್ಣ ಭಾಗ್ವತರ ಜೊತೆ ಗದ್ದೆ ಕೆಲಸಕ್ಕೆ ಹೋಗುವುದು ವಾಡಿಕೆ. ಮೇಳದಲ್ಲಿನ ವೇಷಭೂಷಣದ ಬಟ್ಟೆಗಳನ್ನು ತೊಳೆದು ಶುಭ್ರಗೊಳಿಸುವ ಕಾರ್ಯ ಸಹ ನಾರಾಯಣ ಭಟ್ಟರ ಮುಖ್ಯ ಕೆಲಸ.
ಹೀಗಿರುವಾಗ ಶಿರಸಿಯಲ್ಲಿ ನಡೆದ ಯಕ್ಷಗಾನದಲ್ಲಿ ಹಾಸ್ಯ ಕಲಾವಿದರು ಗೈರಾಗಿದ್ದರು. ಉಳಿದ ಕಲಾವಿದರಿಗೆ ಆತಂಕ! ಆಗ ಸಣ್ಣಣ್ಣ ಭಾಗ್ವತರು `ನಮ್ಮ ನಾರಾಯಣ ಹಾಸ್ಯ ಮಾಡ್ತ’ ಎನ್ನುತ್ತ ವೇಷ ಮಾಡಿಸಿಯೇ ಬಿಟ್ಟರು. ಅನಿವಾರ್ಯಕ್ಕೆ ಮಾಡಿದ ಹಾಸ್ಯ ಪಾತ್ರವೇ ಮುಂದೆ ಹಲವು ಪಾತ್ರಗಳನ್ನು ನೀಡಿತು. ಆ ಪಾತ್ರವೇ ಅವರನ್ನು ಮೇಳದ ಹಾಸ್ಯಗಾರರನ್ನಾಗಿಸಿತು. ಮತ್ತೆ 6 ವರ್ಷಗಳ ಕಾಲ ವೇಷಭೂಷಣದ ಪೆಟ್ಟಿಗೆ ಹೊತ್ತು ಬರುವುದರ ಜತೆಗೆ ಹಾಸ್ಯಪಾತ್ರವನ್ನೂ ನಿಭಾಯಿಸಿದರು.
ಎಲ್ಲಿಯೂ ಪಾಠಕ್ಕೆ ಹೋಗದೇ ಬೇರೆಯವರನ್ನು ನೋಡಿಯೇ ವೇಷ ಕಟ್ಟಿದ ಅಪರೂಪದ ಕಲಾವಿದರಾಗಿ ನಾರಾಯಣ ಭಟ್ಟರು ಗುರುತಿಸಿಕೊಂಡರು. ಅನಿವಾರ್ಯತೆ ಬಂದಾಗ ಒಮ್ಮೆ ಕೋಡಂಗಿ ವೇಷ ಮಾಡುತ್ತಿದ್ದರು. ಒಮ್ಮೆ ಮಾತ್ರ ಕಿರೀಟ ಧರಿಸಿ ವಿರಾಟ ಪರ್ವದ ವಿರಾಟರಾಜನ ಪಾತ್ರವನ್ನು ನಿಭಾಯಿಸಿದರು. ಆಗ ಮೇಳದಲ್ಲಿದ್ದ ಸಣ್ಣಣ್ಣ ಭಾಗ್ವತರು, ಬಾಳೆಕುಂಕಿ ರಾಮ ಭಟ್ಟ, ಬಾಲೀಗದ್ದೆ ನಾಗೇಶ ಭಟ್ಟ, ವೈದಿಕರಮನೆ ಶಿವರಾಮ ಭಟ್ಟ, ಸುಬ್ರಾಯ ಗೋಳಿಗದ್ದೆ ಮುಂತಾದ ಕಲಾವಿದರು ನೀಡಿದ ಪ್ರೋತ್ಸಾಹ – ಮಾರ್ಗದರ್ಶನವನ್ನು ಈಗಲೂ ಅವರು ಸ್ಮರಿಸುತ್ತಾರೆ.
ಹೀಗಿರುವಾಗ ಒಮ್ಮೆ ಸ್ವರ್ಣವಲ್ಲಿ ಮಠದಲ್ಲಿ ಅಡುಗೆ ಕೆಲಸಕ್ಕೆ ಸೇರುವ ಅವಕಾಶ ಸಿಕ್ಕಿತು. ಅಲ್ಲಿಂದ ವೇಷ ಮಾಡುವುದನ್ನು ಬಿಟ್ಟರು. ಸುಮಾರು 25 ವರ್ಷಗಳ ಕಾಲ ಮಠದಲ್ಲಿ ಸೇವೆ ಸಲ್ಲಿಸಿದರು. ಆದರೆ, ಎಲ್ಲಿಯೇ ಯಕ್ಷಗಾನ ಇದ್ದರೂ ಅವರು ಅಲ್ಲಿ ಪ್ರೇಕ್ಷಕರಾಗಿ ಹಾಜರಾಗುತ್ತಿದ್ದರು. ನಂತರ ಕೆಲಕಾಲ ಶಿರಸಿಯ ಕಡಬಾಳದಲ್ಲಿ ವಾಸವಾಗಿದ್ದರು. ಮಾಗೋಡ ಸಮೀಪದ ಮಾಲದಮನೆಯ ಭಾಗೀರತಿ ಅವರನ್ನು ವಿವಾಹವಾಗಿರುವ ಭಟ್ಟರಿಗೆ ನಾಲ್ವರು ಪುತ್ರಿಯರು.
ಪ್ರಸ್ತುತ 93 ರ ಇಳಿ ವಯಸ್ಸಿನ ನಾರಾಯಣ ಭಟ್ಟರು ಸಾಗರದಲ್ಲಿ ಮಗಳ ಮನೆಯಲ್ಲಿ ನೆಲೆಸಿದ್ದಾರೆ. ಮೇಳದ ತಿರುಗಾಟದಲ್ಲಿ ಆದ ಅನುಭವಗಳು, ಎದುರಾದ ಸಮಸ್ಯೆಗಳು, ಖುಷಿ ಕೊಟ್ಟ ಕ್ಷಣಗಳು ಎಲ್ಲವನ್ನು ಪ್ರೀತಿಯಿಂದ ಮೆಲುಕು ಹಾಕುತ್ತಾರೆ.
ಕರ್ನಾಟಕ ಕಲಾ ಸನ್ನಿಧಿ
Discussion about this post