ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ರಾಜೀನಾಮೆಗೆ ಆಗ್ರಹಿಸಿ ವೈಯಕ್ತಿಕ ನಿಂದನೆ ಮಾಡಿದ ಕಾರಣ ಪಟ್ಟಣ ಪಂಚಾಯತ ಸದಸ್ಯ ಸೋಮು ನಾಯ್ಕ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ( Sumoto ) ದಾಖಲಿಸಿಕೊಂಡಿದ್ದಾರೆ.
ಅಗಸ್ಟ 19ರಂದು ಸಂಜೆ 6 ಗಂಟೆಗೆ ಪೊಲೀಸ್ ಸಿಬ್ಬಂದಿ ಚನ್ನಕೇಶವ ಡಿಕೆ ಅವರು ತಮ್ಮ ಮೊಬೈಲ್ ನೋಡುತ್ತಿದ್ದಾಗ ಸೋಮು ನಾಯ್ಕ ತನ್ನ ವಾಟ್ಸಪ್ ಸ್ಟೇಟಸ್ಸಿನಲ್ಲಿ ಶಿವರಾಮ ಹೆಬ್ಬಾರ್ ಅವರ ಫೋಟೋ ಹಾಕಿಕೊಂಡಿರುವುದು ಕಾಣಿಸಿದೆ. ಅದರ ಜೊತೆ ಪಟ್ಟಣ ಪಂಚಾಯತ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಂಬ0ಧಿಸಿ ಬರೆದ ಒಕ್ಕಣಿಕೆಯಿದ್ದು, `ಕಮಲದ ಚಿಹ್ನೆ ಅಡಿ ಆಯ್ಕೆಯಾದ ನಿಮಗೆ ನೈತಿಕತೆ ಇದ್ದರೆ ಬಿಜೆಪಿ ಬೆಂಬಲಿತರಿಗೆ ಮತ ನೀಡಿ. ಇಲ್ಲವಾದಲ್ಲಿ ರಾಜೀನಾಮೆ ನೀಡಿ ಚುನಾವಣೆಗೆ ಸಿದ್ಧರಾಗಿ’ ಎಂದು ಬರೆದಿದ್ದನ್ನು ಪೊಲೀಸರು ಗಮನಿಸಿದ್ದಾರೆ. ಇದರ ಜೊತೆ ಒಕ್ಕಣಿಕೆಯಲ್ಲಿ `ಮರ್ಡರ್’ ಎಂಬ ಪದ ಎರಡು ಬಾರಿ ಬಳಕೆಯಾಗಿರುವುದನ್ನು ನೋಡಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ( Sumoto ) ದಾಖಲಿಸಿಕೊಂಡಿದ್ದಾರೆ.
ಪಿಎಸ್‌ಐ ಸಿದ್ದು ಗುಡಿ ಈ ಪ್ರಕರಣದ ತನಿಖಾಧಿಕಾರಿಯಾಗಿದ್ದಾರೆ. `ಶಾಸಕ ಶಿವರಾಮ ಹೆಬ್ಬಾರ್ ರಾಜೀನಾಮೆಗೆ ಅನೇಕರು ಆಗ್ರಹಿಸಿದ್ದು, ರಾಜೀನಾಮೆಗೆ ಆಗ್ರಹಿಸಿದ ಎಲ್ಲರ ಮೇಲೆ ಏಕೆ ಪ್ರಕರಣ ದಾಖಲಾಗಿಲ್ಲ?’ ಎಂದು ಪ್ರಶ್ನಿಸಿದಾಗ `ರಾಜೀನಾಮೆಗೆ ಆಗ್ರಹಿಸಿದ ಕಾರಣ ದಾಖಲಾದ ಪ್ರಕರಣ ಇದಲ್ಲ. ಶಾಸಕರ ಫೋಟೋ ಜೊತೆ ಮರ್ಡರ್ ಎಂಬ ಪದ ಬಳಕೆ ಮಾಡಿರುವುದು ಹಾಗೂ ವೈಯಕ್ತಿಕ ನಿಂದನೆ ಕಾರಣ ಸುಮೊಟೊ ದಾಖಲಿಸಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.




Discussion about this post