ಯಲ್ಲಾಪುರ ಪಟ್ಟಣ ಪಂಚಾಯತ ( Municipality ) ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸೋಮೇಶ್ವರ ನಾಯ್ಕ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಿಸಿರುವುದನ್ನು ಯಲ್ಲಾಪುರ ನಗರ ಬಿಜೆಪಿ ಘಟಕ ಖಂಡಿಸಿದೆ. ಈ ಪ್ರಕರಣ ಖಂಡಿಸಿ ಅಗಸ್ಟ 21ರಂದು ನಡೆಯಲಿರುವ ಪ ಪಂ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನದ ಚುನಾವಣೆಯನ್ನು ಬಿಜೆಪಿ ಸದಸ್ಯರು ಬಹಿಷ್ಕರಿಸಿದ್ದಾರೆ.
`ಯಲ್ಲಾಪುರ ಶಾಸಕರಿಗೆ ಬಿಜೆಪಿ ಪಕ್ಷದಿಂದ ವಿಪ್ ಜಾರಿಯಾದ ನಂತರ ಸೋಮೇಶ್ವರ ನಾಯ್ಕ ವಿರುದ್ಧ ಪ್ರಕರಣ ದಾಖಲಾಗಿದೆ. ಶಾಸಕರ ಕುಮ್ಮಕ್ಕಿನಿಂದ ಈ ಪ್ರಕರಣ ದಾಖಲಾದಂತೆ ಕಾಣುತ್ತಿದ್ದು, ರಾಜಕಾರಣದಲ್ಲಿ ಈ ರೀತಿಯ ಘಟನೆ ಕಪ್ಪುಚುಕ್ಕೆ’ ಬಿಜೆಪಿ ( BJP ) ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಆರೋಪಿಸಿದರು.
`ತಿಂಗಳ ಹಿಂದೆ ಬನವಾಸಿಯಲ್ಲಿ ಶಿವರಾಮ ಹೆಬ್ಬಾರ್, ಇಡಿ ಅವರು ನಮ್ಮನ್ನು ಮರ್ಡರ್ ಮಾಡುತ್ತಾರಾ? ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಯಾಗಿ ಸೋಮೇಶ್ವರ ನಾಯ್ಕ, ನಿಮ್ಮನ್ನು ಯಾರೂ ಮರ್ಡರ್ ಮಾಡಲ್ಲ ಎಂದು ವಾಟ್ಸಪ್ ಸ್ಟೇಟಸ್ ಹಾಕಿದ್ದರು. ಮರ್ಡರ್ ಪದ ಬಳಕೆ ಮಾಡಿದ ಎಲ್ಲರ ಮೇಲೆಯೂ ಸ್ವಯಂ ಪ್ರೇರಣೆಯ ಪ್ರಕರಣ ದಾಖಲು ಮಾಡುವುದಾದರೆ ಶಾಸಕರ ಮೇಲೆ ಸಹ ಪ್ರಕರಣ ದಾಖಲಾಗಬೇಕಿತ್ತು ಎಂದು ಬಿಜೆಪಿ ಪ್ರಮುಖ ರಾಮು ನಾಯ್ಕ ಹೇಳಿದರು. ಈ ಬಗ್ಗೆ ಪೊಲೀಸರನ್ನು ಪ್ರಶ್ನಿಸಿದಾಗ `ಶಾಸಕರು ಈ ಪದ ಬಳಕೆ ಮಾಡಿದ ಬಗ್ಗೆ ಮಾಹಿತಿ ಇಲ್ಲ’ ಎಂದು ಪೊಲೀಸರು ತಿಳಿಸಿದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
`ಈ ಹಿಂದೆ ಕಾಂಗ್ರೆಸ್ಸಿನಿoದ ಗೆದ್ದ ಪ ಪಂ ಸದಸ್ಯರು ಬಿಜೆಪಿ ಸೇರಿದ್ದರು. ಬಿಜೆಪಿಯ ಮೂಲಕ ವಿವಿಧ ಹುದ್ದೆಗಳನ್ನು ಅನುಭವಿಸಿದವರು ಇದೀಗ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಸೋಮೇಶ್ವರ ನಾಯ್ಕ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಇತರರನ್ನು ಬೆದರಿಸುವ ತಂತ್ರ ನಡೆದಿದೆ. ನಮ್ಮ ಧ್ವನಿ ಅಡಗಿಸುವ ಪ್ರಯತ್ನ ಇದರಲ್ಲಿದೆ’ ಎಂದು ಬಿಜೆಪಿ ಪ್ರಮುಖರು ದೂರಿದರು.
ಅಪಹರಣ ಶಂಕೆ:
`ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಅಪಹರಣವಾಗಿರುವ ಶಂಕೆಯಿದೆ’ ಎಂದು ಪ ಪಂ ಸದಸ್ಯ ಶ್ಯಾಮಿಲಿ ಪಾಠಣಕರ್ ಅನುಮಾನ ವ್ಯಕ್ತಪಡಿಸಿದರು. `ಸೋಮವಾರ ರಾತ್ರಿಯಿಂದ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ’ ಎಂದವರು ಹೇಳಿದರು.
ಹೆಬ್ಬಾರ್ ಇದೆ ಗೌರವ:
`ಶಿವರಾಮ ಹೆಬ್ಬಾರ್ ಅವರ ಬಗ್ಗೆ ನನಗೆ ವೈಯಕ್ತಿಕವಾಗಿ ಗೌರವವಿದೆ. ಆದರೆ, ಪಕ್ಷದ ವಿಚಾರದಲ್ಲಿ ಈ ಬಗೆಯ ನಡೆ ಸರಿಯಲ್ಲ’ ಎಂದು ಪ್ರಸಾದ ಹೆಗಡೆ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಉಮೇಶ ಭಾಗ್ವತ, ಜಿ ಎನ್ ಗಾಂವ್ಕರ್, ಪ್ರದೀಪ ಯಲ್ಲಾಪುರಕರ, ಆದಿತ್ಯ ಗುಡಿಗಾರ, ಕಲ್ಪನಾ ನಾಯ್ಕ, ಗಣಪತಿ ಮುದ್ದೇಪಾಲ್ ಇತರರು ಇದ್ದರು.




Discussion about this post