ಬುಧವಾರ ಮಧ್ಯಾಹ್ನ ಯಲ್ಲಾಪುರ ಪಟ್ಟಣ ಪಂಚಾಯತ ಅಧ್ಯಕ್ಷೆಯಾಗಿ ಅಧಿಕಾರವಹಿಸಿಕೊಂಡ ನರ್ಮದಾ ನಾಯ್ಕ ಗುರುವಾರ ಬೆಳಗ್ಗೆ ದಿಢೀರ್ ಆಗಿ ಇಂದಿರಾ ಕ್ಯಾಂಟೀನ್’ಗೆ ( Indira canteen ) ತೆರಳಿ ಅಲ್ಲಿ ವಿತರಿಸುವ ಆಹಾರ ಗುಣಮಟ್ಟದ ಪರಿಶೀಲನೆ ನಡೆಸಿದರು. ಅವ್ಯವಸ್ಥೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು `ತಕ್ಷಣ ಎಲ್ಲವನ್ನು ಸರಿಪಡಿಸಿ’ ಎಂದು ತಾಕೀತು ಮಾಡಿದರು.
ಇಂದಿರಾ ಕ್ಯಾಟಿನ್ ( Indira canteen ) ಮೇಲ್ಚಾವಣಿಗೆ ಪಟ್ಟಣ ಪಂಚಾಯತ 6 ಲಕ್ಷ ರೂ ವೆಚ್ಚ ಮಾಡಿದ್ದು, ಇಲ್ಲಿ ಕಳಪೆ ಕಾಮಗಾರಿ ನಡೆದ ಬಗ್ಗೆ ದೂರುಗಳಿದ್ದವು. ಮಳೆ ನೀರು ಒಳಬರುವಂತೆ ಕಾಮಗಾರಿ ನಡೆಸಿದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಕಾಮಗಾರಿ ಸರಿಯಿಲ್ಲದ ಕಾರಣ ಗುತ್ತಿಗೆದಾರರ ಹಣ ತಡೆಹಿಡಿಯುವಂತೆ ಮುಖ್ಯಾಧಿಕಾರಿ ಸುನಿಲ ಗಾವಡೆ ಅವರಿಗೆ ಸೂಚಿಸಿದರು. ನಂತರ ಅಡುಗೆ ಕೋಣೆಗೆ ತೆರಳಿ ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ಕಿಡಿಕಾರಿದರು.
ಕ್ಯಾಂಟಿನ್ ಒಳಗಿನ ಗ್ರಾಂಡರ್, ಪ್ರೀಜ್, ಗ್ಯಾಸ್ ಓಲೆ ಹಾಗೂ ಪಿಲ್ಟರ್ ಹಾಳಾಗಿರುವುದನ್ನು ಪರಿಶೀಲಿಸಿ ಸರಿಪಡಿಸುವಂತೆ ಸೂಚಿಸಿದರು. ಲಕ್ಷಾಂತರ ರೂ ಮೌಲ್ಯದ ಪಾತ್ರೆ ಇಡುವ ಪ್ರದೇಶದ ಬಾಗಿಲು ಮುರಿದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು. `ಈ ಎಲ್ಲವನ್ನು ಪಟ್ಟಣ ಪಂಚಾಯತದಿoದ ಸರಿಪಡಿಸಬೇಕು’ ಎಂದು ಸೂಚಿಸಿದರು.
ಈ ವೇಳೆ ಶಾಲಾ ಮಕ್ಕಳ ಜೊತೆ ಕುಳಿತ ಅವರು ಪ ಪಂ ಸದಸ್ಯ ಸತೀಶ್ ನಾಯ್ಕ ಹಾಗೂ ರಾಜು ನಾಯ್ಕ ಅವರ ಜೊತೆಗೂಡಿ ಊಟ ಮಾಡಿದರು. ಊಟದ ಗುಣಮಟ್ಟ ಕಾಪಾಡಿಕೊಂಡ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ತಮ್ಮ ಕಾರ್ಯಾಲಯದಲ್ಲಿ ನಮೂನೆ 3 ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಪ ಪಂ ಅಧ್ಯಕ್ಷೆ ನರ್ಮದಾ ನಾಯ್ಕ ಇಂದಿರಾ ಕ್ಯಾಂಟಿನ್’ಗೆ ಭೇಟಿ ನೀಡಿ ಮಾಡಿದ್ದೇನು? ನೋಡಿದ್ದೇನು? ಹೇಳಿದ್ದೇನು? ನೀಡಿದ ವಿಡಿಯೋ ಇಲ್ಲಿ ನೋಡಿ..
Discussion about this post