14 ವರ್ಷಗಳ ಹಿಂದೆ ವಿಪರೀತ ತಂಬಾಕು ಸೇವನೆ ಮಾಡುತ್ತಿದ್ದ ಶಾಸಕ ಶಿವರಾಮ ಹೆಬ್ಬಾರ್ ಇದೀಗ ಗುಟಕಾ ಕೊಟ್ಟೆಯನ್ನು ಸಹ ಸಹಿಸಲ್ಲ!
ಬುಧವಾರ ಯಲ್ಲಾಪುರ ಪಟ್ಟಣ ಪಂಚಾಯತದಲ್ಲಿ ನಡೆದ `ತಂಬಾಕು ದುಷ್ಪರಿಣಾಮ’ ಕಾರ್ಯಾಗಾರದಲ್ಲಿ ಅವರು ಈ ವಿಷಯ ಬಹಿರಂಗಪಡಿಸಿದರು.
`ಮೊದಲು ನಾನು ಅತಿಯಾದ ತಂಬಾಕು ಸೇವಿಸುತ್ತಿದ್ದೆ. ಆದರೆ, ಗುಟಕಾದಿಂದ ಆಗುವ ದುಷ್ಪರಿಣಾಮಗಳನ್ನು ಅರಿತು ಅದರಿಂದ ಹೊರಬಂದಿದ್ದೇನೆ. ತಂಬಾಕು, ಗುಟಕಾ, ಸಿಗರೇಟಿನಿಂದ ಕಾನ್ಸರ್ ಪ್ರಮಾಣ ಹೆಚ್ಚಾಗುತ್ತಿದೆ. ತಂಬಾಕಿನ ಉತ್ಪನ್ನಗಳು ಬಡವರನ್ನು ಇನ್ನಷ್ಟು ಬಡವರನ್ನಾಗಿ ಮಾಡುತ್ತದೆ. ಹೀಗಾಗಿ ನೀವು ಅದನ್ನು ಬಿಟ್ಟುಬಿಡಿ’ ಎಂದು ಅಲ್ಲಿ ನೆರೆದಿದ್ದವರಿಗೆ ಅವರು ಕರೆ ನೀಡಿದರು.
`ದುಷ್ಚಟಗಳಿಗೆ ದಾಸರಾದರೆ ಹಂತ ಹಂತವಾಗಿ ಅದರಿಂದ ಹೊರಬರುವುದು ಕಷ್ಟ. ದೃಢ ಮನಸ್ಸು ಇದ್ದರೆ ಮಾತ್ರ ದುಷ್ಚಟಗಳಿಂದ ದೂರವಾಗಬಹುದು. 5-10 ದಿನಗಳ ಮಟ್ಟಿಗೆ ದುಷ್ಚಟದಿಂದ ಹೊರಬಂದು ನಂತರ ಮತ್ತೆ ಸೇವಿಸಿದರೆ ಅದರಿಂದ ಯಾವ ಪ್ರಯೋಜನ ಸಹ ಇಲ್ಲ’ ಎಂದರು.



