ಕೊಂಕಣ ರೈಲ್ವೆ ವಿಭಾಗದಲ್ಲಿ ಹಳಿಗಳ ನಿರ್ವಹಣೆ ನೋಡಿಕೊಳ್ಳುವ ಮಹಾದೇವ ನಾಯ್ಕ ಎಂಬಾತರ ಸಮಯ ಪ್ರಜ್ಞೆಯಿಂದ ಸಾವಿರಾರು ಜನರ ಜೀವ ಉಳಿದಿದೆ. 5 ನಿಮಿಷದಲ್ಲಿ 500ಮೀ ಓಡಿದ ಅವರು ಅಪಾಯದ ಸ್ಥಿತಿ ಎದುರಾಗುವ ಮುನ್ನ ಚಲಿಸುತ್ತಿದ್ದ ರೈಲನ್ನು ನಿಲ್ಲಿಸಿದ್ದಾರೆ.
ಮೊನ್ನೆ ಕೊಂಕಣ ರೈಲ್ವೆ ಮಾರ್ಗದಲ್ಲಿ ಕುಮಟಾ-ಹೊನ್ನಾವರ ನಡುವೆ ಹಳಿಗಳ ವೆಲ್ಡಿಂಗ್ ಬಿಟ್ಟಿತ್ತು. ಇದರಿಂದ ರಾಜಧಾನಿ ಎಕ್ಸಪ್ರೆಸ್ ರೈಲು ಹಳಿ ತಪ್ಪುವ ಸಾಧ್ಯತೆ ಇತ್ತು. ನಸುಕಿನ 4.51ಕ್ಕೆ ಬ್ಯಾಟರಿ ಹಿಡಿದು ರೈಲ್ವೆ ಮಾರ್ಗ ಪರಿಶೀಲಿಸುತ್ತಿದ್ದ ಮಾದೇವ ನಾಯ್ಕ ಇದನ್ನು ಗಮನಿಸಿದ್ದು, ತಿರುವನಂತಪುರoನಿoದ ನವದೆಹಲಿ ಕಡೆ ಹೋಗುವ ರೈಲನ್ನು ಹೊನ್ನಾವರದಲ್ಲಿಯೇ ನಿಲ್ಲಿಸಲು ಸ್ಟೇಶನ್ ಮಾಸ್ತರ್’ಗೆ ಫೋನ್ ಮಾಡಿದ್ದರು. ಆದರೆ, ಬೆಳಗ್ಗೆ 4.59ಕ್ಕೆ ಆ ರೈಲು ಹೊನ್ನಾವರದಿಂದ ಮುಂದೆ ಸಾಗಿತ್ತು. ಸ್ಟೇಷನ್ ಮಾಸ್ಟರ್ ಲೋಕೋ ಪೈಲಟ್’ಗೆ ಫೋನ್ ಮಾಡಿದ್ದರೂ ಸರಿಯಾದ ಸಂಪರ್ಕ ಸಾಧ್ಯವಾಗಿರಲಿಲ್ಲ.
8 ನಿಮಿಷದ ಅವಧಿಯಲ್ಲಿ ಆ ರೈಲು ಹಳಿ ಹಾಳಾದ ಸ್ಥಳ ತಲುಪುವ ಸಾಧ್ಯತೆ ಅರಿತ ಮಾಹಾದೇವ ನಾಯ್ಕ ಕೈಯಲ್ಲಿ ಕೆಂಪು ಬಟ್ಟೆ ಹಿಡಿದು ರೈಲ್ವೆ ಹಳಿಗಳ ಮೇಲೆ ಹೊನ್ನಾವರದ ಕಡೆ ಓಡಲು ಶುರು ಮಾಡಿದರು. ಅಪಾಯದ ಮುನ್ಸೂಚನೆ ನೀಡಿ ಮಾರ್ಗದ ನಡುವೆಯೇ ಕೊನೆಗೂ ರೈಲನ್ನು ನಿಲ್ಲಿಸಿದರು. ನಂತರ ತಂತ್ರಜ್ಞರು ಆಗಮಿಸಿ ರೈಲ್ವೆ ಹಳಿ ಸರಿಪಡಿಸಿದ್ದು, ರೈಲು ಮುಂದೆ ಚಲಿಸಿತು.
ಮಹಾದೇವ ನಾಯ್ಕ ಕಾರ್ಯ ಮೆಚ್ಚಿದ ಕೊಂಕಣ ರೈಲ್ವೆ ಅಧಿಕಾರಿಗಳು 15 ಸಾವಿರ ರೂ ಬಹುಮಾನ ನೀಡಿ, ಗೌರವಿಸಿದರು.