ಯಲ್ಲಾಪುರ: ನರೇಗಾ ಕೂಲಿಕಾರರ ಮೂರು ವರ್ಷದೊಳಗಿನ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಕುಂದರಗಿಯಲ್ಲಿ ಕೂಸಿನ ಮನೆ ನಿರ್ಮಿಸಲಾಗಿದ್ದು, ಶುಕ್ರವಾರ ಜಿ ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೋ ಅಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಲ್ಲಿಗೆ ಆಗಮಿಸುವ ಮಕ್ಕಳ ಹಾಜರಿ, ಸರಕಾರದಿಂದ ಒದಗಿಸಲಾದ ಆಟಿಕೆ ಸಾಮಗ್ರಿ ಹಾಗೂ ಆಹಾರ ವಿತರಣೆ ವೇಳಾಪಟ್ಟಿ ಕುರಿತು ಮಾಹಿತಿ ಪಡೆದರು. ಮಕ್ಕಳನ್ನು ನೋಡಿಕೊಳ್ಳುವವರಿಗೆ ಸೂಕ್ತ ತರಬೇತಿ ನೀಡುವಂತೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು. ಇದಾದ ನಂತರ ಕುಂದರಗಿ ಪಶು ಚಿಕಿತ್ಸಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿನೀಡಿ ಸಿಬ್ಬಂದಿ ಹಾಜರಾತಿ, ಗ್ರಾಮೀಣ ಜನರಿಗೆ ಸಿಗುವ ಔಷಧೋಪಚಾರಗಳು, ಔಷಧೀಯ ದಾಸ್ತಾನು ಕುರಿತು ಮಾಹಿತಿ ಪಡೆದರು.
ಇದಾದ ನಂತರ ಚಂದಗುಳಿ, ಹಾಸಣಗಿ ಹಾಗೂ ನಂದೊಳ್ಳಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ನರೇಗಾ ಮತ್ತು ವಿವಿಧ ಯೋಜನೆಗಳ ಅಡಿ ನಡೆದ ಕಾಮಗಾರಿಗಳ ವೀಕ್ಷಣೆ ಮಾಡಿದರು.
ಹಾಸಣಗಿ ಗ್ರಾಮ ಪಂಚಾಯತಿ ಕಚೇರಿ, ಸಭಾ ಭವನ, ದಾಸ್ತಾನು ಕೊಠಡಿ, ಮಾಳಕೊಪ್ಪ ಶಾಲೆಯಲ್ಲಿ ನರೇಗಾದಡಿ ನಿರ್ಮಿತ ಶೌಚಾಲಯ ಹಾಗೂ ಕಾಂಪೌ0ಡ್, ಒಳ್ಳೆಸರದಲ್ಲಿ ನಿರ್ಮಿತ ಕೊಳವೆ ಬಾವಿ ಮರುಪೂರಣ ಘಟಕ ಕಾಮಗಾರಿ ಪರಿಶೀಲಿಸಿದರು. ಬಾಚನಳ್ಳಿಯಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಪ್ರತಿದಿನದ ಹಾಜರಾತಿ, ಮಕ್ಕಳ ಹಾಜರಾತಿ, ಮಕ್ಕಳಿಗೆ ವಿತರಿಸುವ ಆಹಾರ ಪದಾರ್ಥಗಳ ವಿವರಣೆ ಪಡೆದರು. ನಂದೊಳ್ಳಿ ಶಾಲೆಯ ಅಡುಗೆ ಕೋಣೆ ಹಾಗೂ ಶೌಚಾಲಯವನ್ನು ನೋಡಿದರು. ಕವಡಿಕೆರೆಗೆ ತೆರಳಿ ಮೀನು ಸಾಕಾಣಿಕೆ ಪ್ರಕ್ರಿಯೆ ಹಾಗೂ ಕೆರೆಯ ಹೆಚ್ಚಿನ ಅಭಿವೃದ್ಧಿ ಕುರಿತು ಚರ್ಚಿಸಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಧನವಾಡಕರ, ನರೇಗಾ ಸಹಾಯಕ ನಿರ್ದೇಶಕ ಮಂಜುನಾಥ ಅಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ, ಪಿಆರ್‌ಇಡಿ ಎಇಇ ಅಶೋಕ ಬಂಟ, ಸಿಡಿಪಿಒ ಶ್ರೀದೇವಿ ಪಟೇಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ರಾಜೇಶ್ ಶೇಟ್, ಶಿವಕುಮಾರ ವಿರಕ್ತಮಠ, ರವಿ ಪಟಗಾರ, ಐಇಸಿ ಸಂಯೋಜಕರಾದ ಫಕ್ಕೀರಪ್ಪ ತುಮ್ಮಣ್ಣನವರ, ಪ್ರಕಾಶ ಹೆಗಡೆ ಇದ್ದರು




