ಶಿರಸಿ: ಇಳಸೂರು ಭಾಗದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಜನ ಆತಂಕದಲ್ಲಿದ್ದಾರೆ.
ಕುಲದೇವನಸರ ಎಂಬಲ್ಲಿ ಚಿರತೆ ಹಸುವಿನ ಮೇಲೆ ಆಕ್ರಮಣ ನಡೆಸಿದೆ. ಜೊತೆಗೆ ಆಕಳ ಜೊತೆಯೇ ಇದ್ದ ಕರುವನ್ನು ಭಕ್ಷಿಸಿದೆ. ಶ್ರೀರಾಮ ಶೆಟ್ಟಿ ಎಂಬಾತರಿಗೆ ಸೇರಿದ ಕೊಟ್ಟಿಗೆ ಇದಾಗಿದ್ದು, ನಸುಕಿನ ವೇಳೆಯಲ್ಲಿ ಚಿರತೆ ಕೊಟ್ಟಿಗೆ ಪ್ರವೇಶಿಸಿದೆ. ಮೊದಲು ಆಕಳ ಕರುವಿನ ಮೇಲೆ ದಾಳಿ ನಡೆಸಿದ ಚಿರತೆ ಅದನ್ನು ಅರೆಬರೆಯಾಗಿ ಭಕ್ಷಿಸಿದ್ದು, ಈ ವೇಳೆ ವಿರೋಧ ವ್ಯಕ್ತಪಡಿಸಿದ ಹಸುವಿನ ಮೇಲೆ ದಾಳಿ ನಡೆಸಿದೆ. ಪರಿಣಾಮ ಹಸು ಸಹ ಗಾಯಗೊಂಡಿದೆ.
ಚಿರತೆ ದಾಳಿಯ ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಲಯ ಅರಣ್ಯಾಧಿಕಾರಿ ಭವ್ಯ ನಾಯ್ಕ ಹಾಗೂ ಅರಣ್ಯ ಸಿಬ್ಬಂದಿ ರವೀಂದ್ರ ಕರ್ನಾಲ್, ಅಮೃತ್ ಅವರು ಚಿರತೆ ಬಂದ ಕುರುಹುಗಳ ಹುಡುಕಾಟ ನಡೆಸಿದರು. ಚೌತಿ ಹಬ್ಬಕ್ಕಾಗಿ ಬೇರೆ ಊರಿನಲ್ಲಿರುವ ಮನೆ ಮಕ್ಕಳು ಸೇರಿ ಅನೇಕರು ಊರಿಗೆ ಬಂದಿದ್ದು, ಈ ವೇಳೆ ಚಿರತೆ ಆಗಮಿಸಿ ಆತಂಕ ಸೃಷ್ಟಿಸಿದ್ದರಿಂದ ಇಳಸೂರು ಜನ ಭಯದಲ್ಲಿದ್ದಾರೆ.