ಅಂಕೋಲಾ ತಾಲೂಕಿನ ಅಲಗೇರಿಯಲ್ಲಿ ವಿಮಾನ ನಿಲ್ದಾಣಕ್ಕಾಗಿ ಭೂಮಿ ಬಿಟ್ಟು ಕೊಟ್ಟವರಿಗೆ ಮನೆ ನಿರ್ಮಾಣಕ್ಕೆ 30*40ರ ಬದಲು 60*90ರ ಸೈಟ್ ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಇದಕ್ಕಾಗಿ ಹೆಚ್ಚುವರಿಯಾಗಿ 11 ಕೋಟಿ ರೂ ಮೀಸಲಿರಿಸಿದೆ.
ಅಲಗೇರಿ ವಿಮಾನ ನಿಲ್ದಾಣ ಭೂಸ್ವಾದೀನ ಪ್ರಕ್ರಿಯೆ ಶುರುವಾದಾಗಲಿನಿಂದ ಆ ಭಾಗದ ಜನ ಆತಂಕದಲ್ಲಿಯೇ ಇದ್ದರು. ಫಲವತ್ತಾದ ಭೂಮಿ ಕಳೆದುಕೊಳ್ಳುವ ನೋವು ಒಂದಡೆಯಾದರೆ ಅದಕ್ಕೆ ತಕ್ಕ ಪರಿಹಾರ ಸಿಗುವುದೇ? ಎಂಬ ಭಯ ಇನ್ನೊಂದು ಕಡೆಯಿಂದ ಕಾಡುತ್ತಿತ್ತು. ಈ ಹಿಂದೆ ಸಾಕಷ್ಟು ಬಾರಿ ಊರಿನವರು ಹೋರಾಟ ನಡೆಸಿ ತಮ್ಮ ಬೇಡಿಕೆಗಳ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಆದರೆ, ಯಾವುದೇ ಪ್ರಯೋಜನ ಆಗಿರಲಿಲ್ಲ.
ಈ ಬಗ್ಗೆ ಹೋರಾಟ ನಡೆಸಿದ ಊರಿನವರಿಗೆ ಇದೀಗ ತುಸು ನೆಮ್ಮದಿ ದೊರೆತಿದೆ. ಅವರ ಬೇಡಿಕೆಯ ಪ್ರಕಾರ ಮನೆ ನಿರ್ಮಾಣಕ್ಕೆ ಕೊಂಚ ದೊಡ್ಡ ಸೈಟ್ ಸಿಗಲಿದೆ. ಇದರೊಂದಿಗೆ ಸಮೀಪದ ನೊಂದಣಾಧಿಕಾರಿ ಕಚೇರಿಯಲ್ಲಿ ಇತ್ತಿಚಿಗೆ ಖರೀದಿ ವಿಷಯವಾಗಿ ನೊಂದಣಿ ಆದ ಭೂಮಿಗಳ ಬೆಲೆಯನ್ನು ಗಮನಿಸಿದ ಅಲ್ಲಿನ ಗರಿಷ್ಟ ದರದ ಆಧಾರದಲ್ಲಿ ಸರ್ಕಾರ ಸಂತ್ರಸ್ತರಿಗೆ ಪರಿಹಾರದ ಹಣ ಪಾವತಿ ಮಾಡಲಿದೆ.