ವ್ಯಾಪಕ ಮಳೆ, ಪ್ರಕೃತಿ ವಿಕೋಪ ಸೇರಿ ವಿವಿಧ ಕಾರಣಗಳಿಂದ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ನೆಲ ಕಚ್ಚಿದೆ. ಪ್ರವಾಸೋದ್ಯಮದಲ್ಲಿ ಸಾಕಷ್ಟು ಉದ್ಯೋಗವಕಾಶ ಹಾಗೂ ಅಭಿವೃದ್ಧಿ ಸಾಧ್ಯತೆಯಿದ್ದರೂ ಇದಕ್ಕೆ ಸ್ಪಂದನೆ ದೊರೆಯದ ಹಿನ್ನಲೆ ಪ್ರವಾಸಿಗರ ಜೊತೆ ಪ್ರವಾಸೋದ್ಯಮ ಹೂಡಿಕೆದಾರರು ಸಹ ನಷ್ಟದಲ್ಲಿದ್ದಾರೆ.
ಜೊಯಿಡಾ ತಾಲೂಕಿನ ಗಣೇಶಗುಡಿ ಭಾಗದಲ್ಲಿ ಜಲ ಸಾಹಸ ಕ್ರೀಡೆ ರಾಫ್ಟಿಂಗ್ ಬಂದ್ ಮಾಡಲಾಗಿದೆ. ಇದರಿಂದಾಗಿ ಜೋಯಿಡಾ-ದಾಂಡೇಲಿ ಭಾಗದ ರೆಸಾರ್ಟ ಹಾಗೂ ಹೋಂ ಸ್ಟೇ’ಗಳು ಖಾಲಿ ಹೊಡೆಯುತ್ತಿವೆ. ಜೊಯಿಡಾ ಹಾಗೂ ದಾಂಡೇಲಿ ಪ್ರವಾಸಿ ಚಟುವಟಿಕೆಗಳಿಂದಲೇ ಪ್ರಸಿದ್ಧಿ ಪಡೆದಿರುವ ಕ್ಷೇತ್ರ. ಆದರೆ, ಇದೀಗ ಪ್ರವಾಸಿಗರೇ ಇಲ್ಲದ ಕಾರಣ ಅಲ್ಲಿನ ಬಹುತೇಕ ವಹಿವಾಟುಗಳು ಸ್ಥಗಿತವಾಗಿದೆ. ರಾಫ್ಟಿಂಗ್ ಜೊತೆ ಫಣಸೋಲಿ ಆನೆ ಸಫಾರಿ, ಕೆನೋಫಿ ವಾಕ್, ಸಿಂಥೇರಿ ರಾಕ್ಸ್, ರೋಪ್ ವೇ ಸೇರಿದಂತೆ ಎಲ್ಲಿಯೂ ಪ್ರವಾಸಿಗರಿಲ್ಲ.
ಕೂಲಿ ಆಳುಗಳಿಗೂ ಕಾಸಿಲ್ಲ!
ಇದರಿಂದ ಪ್ರವಾಸೋದ್ಯಮಕ್ಕಾಗಿ ಹೂಡಿಕೆ ಮಾಡಿದವರ ಜೊತೆ ಅಲ್ಲಿ ದುಡಿಯುವ ಕೂಲಿ ಕಾರ್ಮಿಕರು ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾವಿರಕ್ಕೂ ಅಧಿಕ ಜನರಿಗೆ ಇದೀಗ ಉದ್ಯೋಗವಿಲ್ಲ. ಹೂಡಿಕೆ ಮಾಡಿದವರು ಬ್ಯಾಂಕ್ ಸಾಲ ಕಟ್ಟುವುದಾದರೂ ಹೇಗೆ? ಎಂಬ ಚಿಂತೆಯಲ್ಲಿದ್ದಾರೆ.