ಯಲ್ಲಾಪುರ: ಪಶು ವೈದ್ಯಕೀಯದಲ್ಲಿ ಹಲವು ರೀತಿಯ ಸಂಶೋಧನೆ ಹಾಗೂ ಸೇವೆ ಸಲ್ಲಿಸಿದ ಆನಗೋಡಿನ ಡಾ ಎನ್ ಬಿ ಶ್ರೀಧರ್ ಅವರಿಗೆ `ಶ್ರೇಷ್ಟ ಸಂಶೋಧಕ’ ಪ್ರಶಸ್ತಿ ದೊರೆತಿದೆ.
ಆನಗೋಡಿನ ಗೇರುಕೊಂಬೆಯವರಾದ ಎನ್ ಬಿ ಶ್ರೀಧರ್ ಅವರು ಪಶು ವೈದ್ಯಕೀಯ ವಿಷಯವಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಸಾಹಿತಿ, ಚಿಂತಕ ಹಾಗೂ ವೈಜ್ಞಾನಿಕ ಬರಹಗಾರರಾಗಿ ಅವರು ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದ ಮುಖ್ಯಸ್ಥರಾಗಿ ಅವರು ಕರ್ತವ್ಯದಲ್ಲಿದ್ದಾರೆ.
ಔಷಧಶಾಸ್ತ್ರ ಹಾಗೂ ವಿಷಶಾಸ್ತ್ರ ವಿಷಯದಲ್ಲಿ ಅವರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. 200ಕ್ಕೂ ಅಧಿಕ ವಿದ್ಯಾರ್ಥಿಗಳು ಅವರ ನೆರವಿನಿಂದ ಸಂಶೋಧನೆ ನಡೆಸಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಮುಖ್ಯವಾಗಿ ಜಾನುವಾರುಗಳಲ್ಲಿ ಕಾಣಿಸುವ ವಿವಿಧ ರೋಗಗಳ ಬಗ್ಗೆ ಅವರು ಅಧ್ಯಯನ ನಡೆಸಿದ್ದಾರೆ. ಸಸ್ಯಜನ್ಯ ಶಿಲೀಂದ್ರವಿಷಜನ್ಯ ಮತ್ತಿತರ ನಿಗೂಢ ಕಾಯಿಲೆಗಳಿಗೆ ಪರಿಹಾರಗಳನ್ನು ಡಾ ಎನ್ ಬಿ ಶ್ರೀಧರ್ ಕಂಡು ಹಿಡಿದಿದ್ದಾರೆ.
ಬಂಜೆತನದಿoದ ಬಳಲುತ್ತಿರುವ ಅನುತ್ಪಾದಕ ಗೋವುಗಳ ಕುರಿತು ಸಂಶೋಧನೆ ನಡೆಸಿದ ಎನ್ ಬಿ ಶ್ರೀಧರ್ ಅವರು ಆಯ್ದ ಚಿಕಿತ್ಸಾ ವಿಧಾನವನ್ನು ಗ್ರಾಮ ಮಟ್ಟದಲ್ಲಿ ಪ್ರಚಾರ ಪಡಿಸಿದ್ದಾರೆ. ಇದರ ಪರಿಣಾಮ ಗೋವುಗಳ ಉಪಯೋಗ ಅರಿತ ಹೈನುಗಾರರು ಅವುಗಳನ್ನು ಕಟುಕರಿಗೆ ನೀಡದೇ ಬದುಕಿಸಿಕೊಂಡಿದ್ದಾರೆ. ಡಾ ಎನ್ ಬಿ ಶ್ರೀಧರ್ ಅವರ ಸಂಶೋಧನೆ ಹಾಗೂ ಯಶೋಗಾಥೆಯನ್ನು ಗುರುತಿಸಿದ ಬೀದರಿನ ಶಿಕ್ಷಕರ ಸಂಘವು ಶಿಕ್ಷಕರ ದಿನಾಚರಣೆ ವೇಳೆ `ಶ್ರೇಷ್ಟ ಸಂಶೋಧಕ’ ಪ್ರಶಸ್ತಿ ನೀಡಿ ಗೌರವಿಸಿದೆ.



