ಶಿರಸಿ: ಚೌತಿ ಹಿನ್ನಲೆ ಗಣಪತಿ ವಿಗ್ರಹ ನೋಡಲು ತೆರಳಿದ್ದ ಬಾಳೆಸರದ ಸ್ವಾತಿ ನಾಯ್ಕ ಅವರ ಚಿನ್ನದ ಸರ ಕಾಣೆಯಾಗಿದ್ದು, ಗಜಾನನೋತ್ಸವ ಸಮಿತಿಯವರು ಅದನ್ನು ಅವರಿಗೆ ಹಿಂತಿರುಗಿಸಿದ್ದಾರೆ.
ಶಿರಸಿಯ ವಿವಿಧ ಕಡೆ ಸ್ಥಾಪಿಸಲಾದ ಗಣಪತಿ ವಿಗ್ರಹಗಳನ್ನು ನೋಡಲು ಸ್ವಾತಿ ಅವರು ತೆರಳಿದ್ದರು. ಆಗ, ಅವರ ಕತ್ತಿನಲ್ಲಿದ್ದ ಸರ ಕಾಣೆಯಾಗಿತ್ತು. ಮನೆಗೆ ಬಂದ ನಂತರ ಸರ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದ್ದು, ಸರ ದೊರಕಿಸಿಕೊಡುವಂತೆ ಅವರು ದೇವರಲ್ಲಿ ಪ್ರಾರ್ಥಿಸಿದ್ದರು.
ಜ್ಯೂ ಸರ್ಕಲ್ ಸಾರ್ವಜನಿಕ ಗಜಾನನೋತ್ಸವ ಸಮಿತಿ ಸದಸ್ಯ ಪ್ರಕಾಶ್ ಬಂಡಾರಿ ಅವರಿಗೆ ಚಿನ್ನದ ಸರ ದೊರೆತಿದ್ದು, ಅವರು ಅದನ್ನು ಪೊಲೀಸರಿಗೆ ಒಪ್ಪಿಸಲು ತೆರಳಿದ್ದರು. ಆಗ ಸ್ವಾತಿ ಅವರ ಚಿನ್ನದ ಸರ ಕಾಣೆಯಾಗಿರುವುದು ಗೊತ್ತಾಗಿ ಅವರನ್ನು ಅಲ್ಲಿಗೆ ಕರೆಯಿಸಿದರು. ಪ್ರಕಾಶ್ ಬಂಡಾರಿ ಅವರಿಗೆ ದೊರೆತ ಸರ ಸ್ವಾತಿ ನಾಯ್ಕ ಅವರದ್ದು ಎಂದು ಖಚಿತಪಡಿಸಿಕೊಂಡು ಪೊಲೀಸರ ಸಮ್ಮುಖದಲ್ಲಿ ಅದನ್ನು ಹಸ್ತಾಂತರಿಸಿದರು.
ಈ ವೇಳೆ ಹಾಜರಿದ್ದ ಪೊಲೀಸರು ಆಭರಣಗಳ ಬಗ್ಗೆ ಕಾಳಜಿವಹಿಸುವಂತೆ ತಿಳುವಳಿಕೆ ನೀಡಿದರು.



