`ಸಮರಸ ಮತ್ತು ಸಮರ ಎರಡಕ್ಕೂ ಸಮಾಜ ಸಜ್ಜಾಗಬೇಕು. ಸಮಾಜದಲ್ಲಿ ಸಮರಸ ಮೂಡಿಸಲು ಶ್ರಮ ಅಗತ್ಯವಿದ್ದು, ಇದರ ಜೊತೆ ನಮ್ಮತನವನ್ನು ಉಳಿಸಿಕೊಳ್ಳಲು ಹೋರಾಟದ ಕೆಚ್ಚನ್ನೂ ರೂಢಿಸಿಕೊಳ್ಳಬೇಕು’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ.
ಬುಧವಾರ ಗೋಕರ್ಣದಲ್ಲಿ ಕೊಡಗು, ಗುಂಪೆ, ಕಾಸರಗೋಡು, ಚಂದ್ರಗಿರಿ, ಗುತ್ತಿಗಾರು ಮತ್ತು ಸುಳ್ಯ ವಲಯಗಳ ಸರ್ವಸೇವೆ ಸ್ವೀಕರಿಸಿದ ಅವರು `ಜಗತ್ತಿಗೆ ಸಮರ ಗೊತ್ತೇ ವಿನಃ ಸಮರಸ ಗೊತ್ತಿಲ್ಲ. ಸಮಾಜದ ಸಾಮರಸ್ಯಕ್ಕಾಗಿ ಸಂಘಟನೆ ಶ್ರಮಿಸಬೇಕು’ ಎಂದರು.
`ಪೊಸಡಿಗುoಪೆಯ ಪರಿಸರದಲ್ಲಿ ಪರ್ವತಾಗ್ರದಲ್ಲಿ ಶಂಕರಧ್ಯಾನ ಮಂದಿರ ಸ್ಥಾಪನೆಯ ಉದ್ದೇಶದಿಂದ ಶಿಷ್ಯಭಕ್ತರು ಸುಮಾರು 10 ಎಕರೆ ಭೂಮಿಯನ್ನು ಕ್ರೋಢೀಕರಿಸಿದ್ದಾರೆ. ಈ ಭೂಮಿಯ ಮೇಲೆ ಸರ್ಕಾರದ ಕೆಟ್ಟ ದೃಷ್ಟಿ ಬಿದ್ದಿದೆ. ಇದನ್ನು ಉಳಿಸಿಕೊಳ್ಳಲು ಸಂಘಟಿತ ಹೋರಾಟ ನಡೆಸಬೇಕು’ ಎಂದು ಕರೆ ನೀಡಿದರು.
`ಭೂಮಿ ಕಳೆದುಕೊಳ್ಳಲು ಬೇಸರವಿಲ್ಲ. ದೊಡ್ಡ ಪ್ರಮಾಣದ ಭೂಮಿಯಲ್ಲಿ ಮಠ ಕಳೆದುಕೊಂಡಿದೆ. ಆದರೆ ಹೀಗೆ ಕಳೆದುಕೊಂಡ ಭೂಮಿ ಸದುಪಯೋಗವಾಗಬೇಕು. ದುರುಪಯೋಗವಾಗುವುದಾದಲ್ಲಿ ಭೂಮಿ ನೀಡಲು ಸಿದ್ಧರಿಲ್ಲ’ ಎಂದು ಸ್ಪಷ್ಟಪಡಿಸಿದರು.