ಸಮಯಕ್ಕೆ ಸರಿಯಾಗಿ ಸೇವೆ ನೀಡದ SBI ಬ್ಯಾಂಕಿಗೆ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ 17 ಸಾವಿರ ರೂ ದಂಡ ವಿಧಿಸಿದೆ.
ಜನ ಜಾಗೃತಿಗಾಗಿ ಅರಿವು ಮೂಡಿಸುತ್ತಿರುವ ಕಾರವಾರದ ಸಂಜಯ್ ಶಾನಭಾಗ್ ಎಸ್‌ಬಿಐ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. `ಸಾಲ ಪಡೆದಾಗ ಮರುಪಾವತಿಗೆ ಪತ್ರ ಬರೆಯುವ ಬ್ಯಾಂಕ್ ಅಧಿಕಾರಿಗಳು ಅದೇ ಬ್ಯಾಂಕಿನಲ್ಲಿ ಗ್ರಾಹಕರು ಠೇವಣಿ ಇಟ್ಟಾಗ ಅದರ ನವೀಕರಣಕ್ಕೆ ನೆನಪಿಸುವುದಿಲ್ಲ. ಅದರಂತೆ ಸಂಜಯ ಶಾನಭಾಗ್ ಅವರು ಹೊಂದಿದ ಪಿಪಿಎಫ್ ವಿಷಯವಾಗಿ ಬ್ಯಾಂಕ್ ಅಧಿಕಾರಿಗಳು ಪತ್ರ ಬರೆದಿರಲಿಲ್ಲ. ಇದೇ ವಿಷಯ ಆಧಾರದಲ್ಲಿ ಅವರು ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಮೊರೆ ಹೋಗಿದ್ದು, ಸಂಜಯ ಶಾನಭಾಗ ಅವರಿಗೆ ಅನ್ಯಾಯವಾಗಿರುವುದನ್ನು ಅರಿತ ಆಯೋಗ ಬ್ಯಾಂಕ್’ಗೆ ದಂಡ ವಿಧಿಸಿದೆ.
2019ರಲ್ಲಿ ಸಂಜಯ ಶಾನಭಾಗ್ ಅವರು ಎಸ್‌ಬಿಐ’ನಲ್ಲಿ ಪಿಪಿಎಫ್ ಖಾತೆ ಹೊಂದಿದ್ದರು. 2021ರ ಮಾರ್ಚ 31ರಂದು ಆ ಖಾತೆ ರಿನಿವಲ್ ಆಗಬೇಕಿದ್ದು, ಅದೇ ದಿನ ಬ್ಯಾಂಕಿಗೆ ಹೋಗಿ ಹಣ ಪಾವತಿಸಿದ್ದರು. ಆದರೆ, ಕಂಪ್ಯುಟರ್ ದೋಷದಿಂದ ಆ ಹಣ ಜಮಾ ಆಗಿರಲಿಲ್ಲ. ಹಣ ಜಮಾ ಆಗದ ಬಗ್ಗೆ ಬ್ಯಾಂಕ್ ಯಾವುದೇ ನೆನಪೋಲೆಯನ್ನು ಸಂಜಯ ಶಾನಭಾಗ್ ಅವರಿಗೆ ಕಳುಹಿಸಿರಲಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಹಾರಿಕೆ ಉತ್ತರ ಬಂದಿದ್ದು, ಕಾನೂನಿನ ಸಾಮಾನ್ಯ ಜ್ಞಾನದ ಬಗ್ಗೆ ಅವರು ಎಸ್‌ಬಿಐ ಅಧಿಕಾರಿಗಳಿಗೆ ತಿಳಿಸಿದ್ದರು. ಆದರೆ, ಅದನ್ನು ಅವರು ಒಪ್ಪಿರಲಿಲ್ಲ. 2022ರ ಜೂನ್ 4ರಂದು ಅವರು ನೀಡಿದ ಹಣವನ್ನು ಸಹ ಪಿಪಿಎಫ್ ಖಾತೆಗೆ ವರ್ಗಾಯಿಸಿರಲಿಲ್ಲ.
ಹೀಗಾಗಿ ಸಂಜಯ ಶಾನಭಾಗ್ ಅವರು ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು. ಎಸ್‌ಎಂಎಸ್ ಅಥವಾ ಇಮೇಲ್ ಮೂಲಕ ಖರ್ಚಿಲ್ಲದೇ ಮಾಹಿತಿ ನೀಡಲು ಅವಕಾಶ ಇದ್ದರೂ ಬ್ಯಾಂಕ್ ಅಧಿಕಾರಿಗಳು ನಿರ್ಲಕ್ಷö್ಯವಹಿಸಿ ನಷ್ಟ ಮಾಡಿದ ಬಗ್ಗೆ ಅವರು ಆಯೋಗಕ್ಕೆ ಮನವರಿಕೆ ಮಾಡಿದ್ದರು. ವಾದ ಆಲಿಸಿದ ಆಯೋಗದ ಅಧ್ಯಕ್ಷ ಮಂಜುನಾಥ ಅವರು ಬ್ಯಾಂಕ್’ಗೆ 17 ಸಾವಿರ ರೂ ಪಾವತಿಸುವಂತೆ ಸೂಚಿಸಿದ್ದಾರೆ.
ಸಂಜಯ ಶಾನಭಾಗ್ ಯಾರು?
ಕಾರವಾರದಲ್ಲಿ ಚಾರ್ಟರ್ಡ್ ಅಕೌಂಟೆ0ಟ್ ಆಗಿರುವ ಸಂಜಯ್ ಶಾನಭಾಗ್ ಅವರು ಆಡಳಿತ ವಿಭಾಗದಲ್ಲಿನ ಲೋಪಗಳ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆ ಪತ್ರಗಳನ್ನು ಬರೆಯುತ್ತಾರೆ. 2001ರಿಂದ 2020ರವರೆಗೂ ಪ್ರತಿ ತಿಂಗಳು ಅವರು ವಿವಿಧ ವಿಷಯಗಳ ಬಗ್ಗೆ ಜಿಲ್ಲಾಡಳಿತದ ಗಮನಸೆಳೆದಿದ್ದಾರೆ. ಸಾವಿರಾರು ಸಮಸ್ಯೆಗಳ ಬಗ್ಗೆ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದು, ಪರಿಹಾರಕ್ಕಾಗಿ ಹಕ್ಕೊತ್ತಾಯ ಮಾಡಿದ್ದಾರೆ.
ಇದಲ್ಲದೇ ಲೆಕ್ಕಪತ್ರ ವಿಭಾಗಗಳ ಕಲಿಕೆಗಾಗಿ ತಮ್ಮಲ್ಲಿ ಬರುವ ಮಕ್ಕಳಿಗೂ ಅವರು ಸಾಮಾಜಿಕ ಹೋರಾಟದ ಪಾಠ ಮಾಡುತ್ತಾರೆ. ಪ್ರತಿ ತಿಂಗಳು ಯಾವುದಾದರೂ ಒಂದು ವಿಷಯದ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಸಮಾಜ ಸೇವೆ ಮಾಡುವಂತೆ ಅವರು ಪ್ರೇರೇಪಿಸುತ್ತಾರೆ. ಪ್ರಸ್ತುತ ಪ್ರತಿ ತಿಂಗಳು ಪತ್ರ ಬರೆಯುವುದನ್ನು ನಿಲ್ಲಿಸಿರುವ ಅವರು ಈ ಹಿಂದೆ ಬರೆದಿದ್ದ ಪತ್ರಗಳನ್ನು ಬೆನ್ನೆತ್ತಿದ್ದಾರೆ.
`ಈ ಪ್ರಕರಣದಿಂದ ನಾನೇನು ದೊಡ್ಡ ಸಾಧನೆ ಮಾಡಿಲ್ಲ. ಬ್ಯಾಂಕ್ ಅಧಿಕಾರಿಗಳಿಗೆ ಅವರು ಮಾಡಲೇ ಬೇಕಾದ ಕೆಲಸದ ಬಗ್ಗೆ ತಿಳುವಳಿಕೆ ಮೂಡಿಸಿದ್ದೇನೆ ಅಷ್ಟೇ’ ಎಂದು ಸಂಜಯ್ ಶಾನಭಾಗ್ ಪ್ರತಿಕ್ರಿಯಿಸಿದರು.