ಉತ್ತರ ಕನ್ನಡ ಜಿಲ್ಲೆ ಜನರ ಜೀವನಾಡಿಯಾದ ಅಡಿಕೆ ಬೆಳೆಗೆ ಕೊಳೆಯ ಜೊತೆ ಎಲೆಚುಕ್ಕಿ ರೋಗ ಸಹ ಕಾಡುತ್ತಿದೆ. ಅಲ್ಲಲ್ಲಿ ಎಲೆಚುಕ್ಕಿ ರೋಗ ಹರಡುವಿಕೆ ಶುರುವಾಗಿದ್ದು, ವಿವಿಧ ಔಷಧಿ ಕಂಪನಿಗಳಿಗೆ ರೈತರ ಆತಂಕವೇ ಬಂಡವಾಳವಾಗಿದೆ.
ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಜೊಯಿಡಾ ಭಾಗದಲ್ಲಿ ಎಲೆಚುಕ್ಕಿ ರೋಗ ವ್ಯಾಪಿಸುವ ಆತಂಕ ಹೆಚ್ಚಿದೆ. ಗಾಳಿಯಲ್ಲಿ ಈ ರೋಗ ಹರಡುತ್ತಿರುವುದರಿಂದ ಒಮ್ಮೆಗೆ ನಿಯಂತ್ರಣ ಕಷ್ಟ. ಕಳೆದ ಮೂರು ವರ್ಷದ ಬೆಳವಣಿಗೆ ನೋಡಿದರೆ ಸೆಪ್ಟೆಂಬರ್ ಎಲೆಚುಕ್ಕಿ ರೋಗ ವ್ಯಾಪಿಸುವ ಅವಧಿಯಾಗಿದೆ.
ಕಳೆದ ವರ್ಷ ಎಲೆಚುಕ್ಕಿ ರೋಗಕ್ಕೆ ಅನೇಕ ಕಂಪನಿಗಳು ಔಷಧಿ ಮಾರಾಟ ಮಾಡಿವೆ. ಆದರೆ, ಆ ಯಾವ ಕಂಪನಿಯ ಔಷಧವೂ ಪ್ರಯೋಜನಕ್ಕೆ ಬಂದಿಲ್ಲ. ರೈತರು ದುಬಾರಿ ಬೆಲೆಯ ಔಷಧಿ ಖರೀದಿಸಿ ತೋಟವನ್ನು ಹಾಳು ಮಾಡಿಕೊಂಡಿದ್ದಾರೆ. ಎಲೆಚುಕ್ಕಿ ರೋಗದ ಔಷಧ ಉತ್ಪಾದಕರು ಜಿಲ್ಲೆಗೆ ಬಂದು ರೋಗದ ಕುರಿತು ಅಧ್ಯಯನವನ್ನು ನಡೆಸಿಲ್ಲ. ಅದಕ್ಕೂ ಮೊದಲೇ ಔಷಧಿಯನ್ನು ಮಾರುಕಟ್ಟೆಗೆ ಬಿಟ್ಟಿರುವುದು ದೊಡ್ಡ ಸಮಸ್ಯೆ.
ಎಲೆಚುಕ್ಕಿ ಮತ್ತು ಕೊಳೆ ರೋಗದಿಂದ ಕಂಗಾಲಾದ ರೈತರು ಪರಿಹಾರಕ್ಕೆ ಆಗ್ರಹಿಸುತ್ತಿದ್ದಾರೆ. ಬೆಳೆ ಹಾನಿ, ಎಲೆಚುಕ್ಕಿ ರೋಗ ಹೆಚ್ಚುತ್ತಿರುವ ವರದಿ ಸರ್ಕಾರಿ ಕಾಗದ ಪತ್ರಗಳಿಗೆ ಮಾತ್ರ ಸೀಮಿತವಾಗಿದೆ. ಕಳೆದ ವರ್ಷಗಳಲ್ಲಿ ಖಾಸಗಿಯವರು ನೀಡಿದ ಔಷಧದಿಂದ ಯಾವ ಪರಿಣಾಮ ಬಿದ್ದಿದೆ? ಎಂಬ ಪ್ರಶ್ನೆಗೆ ಯಾರಲ್ಲಿಯೂ ಉತ್ತರವಿಲ್ಲ.