ಜಂಬೇಸಾಲಿನ ಆರ್ ಎಸ್ ಹೆಗಡೆ ಅವರು ಯಕ್ಷಗಾನದ ಹಿಮ್ಮೇಳ, ಮುಮ್ಮೇಳಗಳ ಜೊತೆ ಸಂಗೀತ, ನಾಟಕ ಹಾಗೂ ಸಾಹಿತ್ಯ ಕೃಷಿಯನ್ನು ನಡೆಸಿದ್ದಾರೆ.
ಹುತ್ಕಂಡ ಶಾಲೆಯಲ್ಲಿ ಕಲಿತ ಅವರು ಶಾಲೆಗೆ ಹೋಗುವ ಅವಧಿಯಲ್ಲಿಯೇ ಸಹೋದರ ಸುಬ್ರಾಯ ಭಟ್ಟ ಅವರಲ್ಲಿ ತಾಳ-ಮೇಳದ ಅಭ್ಯಾಸ ನಡೆಸಿದರು. ದೇಸಾಯಿಮನೆಯ ನಾರಾಯಣ ದೇಸಾಯಿ ಹಾಗೂ ವಿಶ್ವನಾಥ ಹೆಗಡೆ ಅವರಿಂದ ಹಾರ್ಮೋನಿಯಂ ಹಾಗೂ ಸಂಗೀತ ಜ್ಞಾನ ಬೆಳಸಿಕೊಂಡರು.
ಬಲೆಕಣಿಯಲ್ಲಿ ನಡೆದ ಅಣಲಗಾರ ಮೇಳದ ಯಕ್ಷಗಾನದ ಮೂಲಕ ರಂಗ ಪ್ರವೇಶ ಮಾಡಿದರು. ನಂತರ ಅಣಲಗಾರ ಮೇಳದಲ್ಲಿ ಮಹಿಳಾ ವೇಷಧಾರಿಯಾಗಿ ಮುಂದುವರಿದರು. ಆಗ ಮೇಳದಲ್ಲಿದ್ದ ಸಣ್ಣಣ್ಣ ಭಾಗ್ವತ, ಗೋಳಿಗದ್ದೆ ಸುಬ್ರಾಯ ಭಟ್ಟ, ನರಸಿಂಹ ಭಟ್ಟ ಜವಳೆಕೆರೆ, ರಾಮಚಂದ್ರ ಭಾಗ್ವತ ಕವಾಳೆ, ನಾಗೇಶ ಭಟ್ಟ ಬಾಲಿಗದ್ದೆ ಹಾಗೂ ಅತಿಥಿ ಕಲಾವಿದರಾಗಿದ್ದ ಕುಮಟಾದ ಗೋವಿಂದ ನಾಯ್ಕ, ಉತ್ತಮ ನಾಯ್ಕ ಹಾಗೂ ಮೂರೂರಿನ ಕೃಷ್ಣ ಹೆಗಡೆ ಅವರು ಆರ್ ಎಸ್ ಹೆಗಡೆ ಅವರನ್ನು ಪ್ರೋತ್ಸಾಹಿಸಿದರು.
ಯಲ್ಲಾಪುರದ ಹಲವು ಭಾಗಗಳಲ್ಲಿ ಅವರು ಯಕ್ಷವೇಷ ಧರಿಸಿದ್ದಾರೆ. ಶಿರಸಿಯ ಹುಲೇಕಲ್, ವಾನಳ್ಳಿ, ಜಡ್ಡಿಗದ್ದೆ ಮುಂತಾದ ಭಾಗಗಳಲ್ಲಿಯೂ ಹಲವು ಆಟಗಳಲ್ಲಿ ವೇಷ ಮಾಡಿದ್ದಾರೆ. ಅಂಬೆ, ಮೋಹಿನಿ, ದಾಕ್ಷಾಯಿಣಿ, ವಿಷಯೆ ಸೇರಿದಂತೆ ಮುಖ್ಯ ಮಹಿಳಾ ವೇಷಗಳಲ್ಲಿ ಹೆಸರುಗಳಿಸಿದ ಆರ್.ಎಸ್.ಹೆಗಡೆ ಆ ಕಾಲದಲ್ಲಿಯೇ ಬಹುಬೇಡಿಕೆಯ ವೇಷಧಾರಿ!
ಮೂರು ದಶಕದ ಹಿಂದೆಯೇ ಒಂದೇ ರಾತ್ರಿಯಲ್ಲಿ 3 ಕಡೆ ಆಟ ಕುಣಿದವರು ಆರ್ ಎಸ್ ಹೆಗಡೆಯವರು. ಹುತ್ಕಂಡದಲ್ಲಿ ಒಂದು ವೇಷ ಮಾಡಿ, ನಂತರ ಚಕ್ಕಡಿಗಾಡಿ ಏರಿ ಬಳಗಾರಿಗೆ ಹೋಗಿ ಇನ್ನೊಂದು ಆಟ ಮಾಡಿದ್ದು ಅವರ ಬೇಡಿಕೆಗೆ ಸಾಕ್ಷಿ. ಒಂದು ಆಟ ಮುಗಿಸಿ ಇನ್ನೊಂದು ಯಕ್ಷ ವೇದಿಕೆಗೆ ಹೋಗುವಾಗ ವಾಹನ ಸಿಗದಿದ್ದರೆ ನಡದೇ ಹೋಗುವುದಕ್ಕೆ ಸಹ ಅವರು ಬೇಸರಿಸುತ್ತಿರಲಿಲ್ಲ.
ಆಕಾಶವಾಣಿಯಲ್ಲಿ ಒಂದು ತಾಳಮದ್ದಲೆಯ ಕಾರ್ಯಕ್ರಮ ನೀಡಲು ಹೋದಾಗ ಅಲ್ಲಿ ಭಾಗವತಿಕೆ ಮಾಡುವವರು ಬಂದಿರಲಿಲ್ಲ. ಸಂಗೀತ ಜ್ಞಾನ ಹೊಂದಿದ್ದ ಹೆಗಡೆಯವರೇ ಭಾಗವತಿಕೆಯನ್ನು ಮಾಡಿದರು. ನಂತರ 15 ವರ್ಷಗಳ ಕಾಲ ಆಕಾಶವಾಣಿಯಲ್ಲಿ ಬಗೆ ಬಗೆಯ ಕಾರ್ಯಕ್ರಮ ನಡೆಸಿಕೊಟ್ಟರು. ಕಲೆಯೊಳಗಿನ ಸೆಳೆತ ಅವರನ್ನು ಭಾಗವತಿಕೆಯಲ್ಲಿ ಮುಂದುವರೆಸಿತು. ಜಡ್ಡಿಗದ್ದೆ, ವಾನಳ್ಳಿ, ಬಿಸಗೋಡ, ಕುಚಗಾಂವ ಸೇರಿ ಅನೇಕ ಕಡೆ ಅವರು ಯಕ್ಷಗಾನ ತರಬೇತಿ ನೀಡಿದ್ದಾರೆ.
ರಾಮಕೃಷ್ಣ ಭಟ್ಟ ಕೆಳಗಿನಪಾಲ, ಈಶ್ವರದಾಸ ಕೊಪ್ಪೆಸರ ಅವರ ಹರಿಕಿರ್ತನೆಗಳಿಗೆ ಹಾರ್ಮೋನಿಯಂ ನುಡಿಸುತ್ತಿದ್ದರು. ಈ ನಡುವೆ ಮಂಚಿಕೇರಿಯ ಕಂಪನಿಯೊ0ದರಲ್ಲಿ ಅವರಿಗೆ ಹಾರ್ಮೋನಿಯಂ ನುಡಿಸುವ ಅವಕಾಶ ದೊರೆಯಿತು. ಅದನ್ನು ಸಮರ್ಥವಾಗಿ ಬಳಸಿಕೊಂಡರು. ಗ್ರಾಮೀಣ ಭಾಗಗಳಲ್ಲಿ ಹಲವರಿಗೆ ಹಾರ್ಮೋನಿಯಂ ಹಾಗೂ ಸಂಗೀತದ ತರಬೇತಿ ನೀಡಿದ ಅವರು ಮಕ್ಕಳಿಗೆ ಪೌರಾಣಿಕ ನಾಟಕದ ನಿರ್ದೇಶನ ಮಾಡಿದ್ದಾರೆ. ಆರೋಗ್ಯ ಜಾಗೃತಿಗಾಗಿ ಸಹ ಅವರು ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.
74ರ ಇಳಿ ವಯಸ್ಸಿನಲ್ಲಿಯೂ ಯಕ್ಷಪದ್ಯಗಳನ್ನು ಹಾಡುವ ಆರ್ ಎಸ್ ಹೆಗಡೆ ಅವರು ಯಲ್ಲಾಪುರದ ಕಾಳಮ್ಮನಗರದಲ್ಲಿ ಮಾತಿಗೆ ಸಿಗುತ್ತಾರೆ. ಬಿಡುವಾದಾಗಲೆಲ್ಲ ಮನೆಯಲ್ಲಿ ಹಾರ್ಮೋನಿಯಂ ಹಿಡಿದು ಸಂಗೀತದ ಅಭ್ಯಾಸ ನಡೆಸುತ್ತಾರೆ.
– ಕರ್ನಾಟಕ ಕಲಾ ಸನ್ನಿಧಿ