ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕಸ್ತೂರಿ ರಂಗನ್ ವರದಿಯಲ್ಲಿನ ನ್ಯೂನ್ಯತೆ ಹಾಗೂ ಅವೈಜ್ಞಾನಿಕ ಅಂಶಗಳ ಬಗ್ಗೆ ನ್ಯಾಯವಾದಿ ರವೀಂದ್ರ ನಾಯ್ಕ ಸರ್ಕಾರಕ್ಕೆ ಮನವರಿಕೆ ಮಾಡಿದ್ದಾರೆ. ಪ್ರಮುಖ 10 ವಿಷಯಗಳ ಬಗ್ಗೆ ವಿವರಿಸಿದ ಅವರು ಬುಧವಾರ ಕಸ್ತೂರಿರಂಗನ್ ವರದಿ ಪರಿಶೀಲನಾ ಸಂಪುಟದ ಎಚ್.ಸಿ.ಮಾದೇವಪ್ಪ ಅವರಿಗೆ ವಿವರಿಸಿದ್ದಾರೆ.
`ಸೆಟಲೈಟ್ ಚಿತ್ರಣದ ಆಧಾರದ ಮೇಲೆ ವಾಸ್ತವಿಕ ಮತ್ತು ನೈಜತೆಯ ಚಿತ್ರಣಕ್ಕೆ ಈ ವರದಿ ವ್ಯತಿರಿಕ್ತವಾಗಿದೆ. ಗ್ರಾಮದ ಶೇ 20ಕ್ಕಿಂತ ಹೆಚ್ಚು ಭೌಗೋಳಿಕ ಪ್ರದೇಶವನ್ನು ಜೀವವೈವಿಧ್ಯ ಪರಿಸರ ಪ್ರದೇಶ ಎಂದು ಸೇರಿಸಲಾಗಿದ್ದು, ಜನಾಭಿಪ್ರಾಯ ಸಂಗ್ರಹ ನಡೆದಿಲ್ಲ. ಪ್ರಸ್ತುತ ಪಶ್ಚಿಮ ಘಟ್ಟ ಪ್ರದೇಶ ರಕ್ಷಣೆ ಹಾಗೂ ಸಂರಕ್ಷಿಸಲು ಅಸ್ತಿತ್ವದಲ್ಲಿರುವ ಕಾನೂನು, ನೀತಿ- ನಿಯಮ ಜಾರಿಯಲ್ಲಿರುವುದರಿಂದ ಹೊಸಮಾನದಂಡದ ಅವಶ್ಯಕತೆ ಇಲ್ಲ’ ಎಂದವರು ವಿವರಿಸಿದ್ದಾರೆ.
`ಈ ವರದಿಯಲ್ಲಿ ಅರಣ್ಯವಾಸಿಗಳ ಜೀವನ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಆಗುವುದನ್ನು ಅವಲೋಕನ ಮಾಡಿಲ್ಲ. ಉಪಗ್ರಹ ಆಧಾರಿತ ಸರ್ವೇ ಆಗಿರುವುದರಿಂದ ಅಡಿಕೆ, ತೆಂಗಿನ ತೋಟ ಹಾಗೂ ಇನ್ನೀತರ ಕೃಷಿ ತೋಟಗಾರಿಕೆ ಬೆಳೆಗಳ ಪ್ರದೇಶವನ್ನು ಹಸಿರು ಅರಣ್ಯ ಎಂದು ಪರಿಗಣಿಸಲಾಗಿದೆ’ ಎಂದವರು ಹೇಳಿದ್ದಾರೆ.



