ಸಿದ್ದಾಪುರ: ಕೋರಿಯರ್ ಮೂಲಕ ವಿದೇಶಕ್ಕೆ ಡ್ರಗ್ಸ ಸಾಗಾಟವಾಗಿದ್ದು, ವಿಳಾಸದಲ್ಲಿ ತಮ್ಮ ಹೆಸರಿದೆ ಎಂದು ನಂಬಿಸಿದ ದುಷ್ಕರ್ಮಿಗಳು ಏಕನಾಥ ಅಂಬಿಗ ಎಂಬಾತರಿoದ 5 ಲಕ್ಷ ರೂ ವಸೂಲಿ ಮಾಡಿದ್ದಾರೆ!
ರವೀಂದ್ರ ನಗರ ಬಾಲಿಕೊಪ್ಪ ಶಾಲೆ ಬಳಿ ವಾಸವಾಗಿರುವ ಏಕನಾಥ ಅಂಬಿಗ ವೃತ್ತಿಯಲ್ಲಿ ಇಂಜಿನಿಯರ್. ಅವರು ಮನೆಯಲ್ಲಿದ್ದಾಗ ಅಪರಿಚಿತ ಸಂಖ್ಯೆಯಿoದ ಫೋನ್ ಬಂದಿದ್ದು ಕರೆ ಮಾಡಿದ ವ್ಯಕ್ತಿಯೊಬ್ಬರು ತನ್ನನ್ನು ಪೊಲೀಸ್ ಎಂದು ಹೇಳಿಕೊಂಡಿದ್ದಾರೆ.`ಕೋರಿಯರ್ ಮೂಲಕ ಇರಾನ್ ದೇಶಕ್ಕೆ ಡ್ರಗ್ಸ ಸಾಗಿಸುವಾಗ ಮುಂಬೈ ಏರ್‌ಪೋರ್ಟಿನಲ್ಲಿ ಹಿಡಿದಿದ್ದು, ಅದರಲ್ಲಿ ನಿಮ್ಮ ಆಧಾರ್ ಕಾರ್ಡ ವಿಳಾಸವಿದೆ’ ಎಂದು ಅಪರಿಚಿತರು ನಂಬಿಸಿದ್ದಾರೆ.
ಅದಾದ ನಂತರ ಮತ್ತೊಬ್ಬ ಮಾತನಾಡಿ ತನ್ನನ್ನು `ನಾರ್ಕೋಟಿಕ್ಸ್ ಪೊಲೀಸ್’ ಎಂದು ಪರಿಚಯಿಸಿಕೊಂಡಿದ್ದು, ಅವರ ತಂಡದವರು `ನಿಮ್ಮ ಮಾಹಿತಿ ಪರಿಶೀಲಿಸಬೇಕು’ ಎಂದು ತಿಳಿಸಿ ವಿಡಿಯೋ ಕಾಲ್ ಮಾಡಿದ್ದಾರೆ. ನಂತರ `ನಿಮ್ಮ ಆಧಾರ್ ಕಾರ್ಡಿನಿಂದ ಬೇರೆ ಬೇರೆ ಬ್ಯಾಂಕ್ ಖಾತೆ ತೆರೆಯಲಾಗಿದೆ. ಅದೆಲ್ಲವನ್ನು ತೆಗೆಯಬೇಕು. ಅದಕ್ಕಾಗಿ ನಿಮ್ಮ ನಿಜವಾದ ಖಾತೆ ನಂ ನೀಡಿ ಎಂದು ಪಡೆದು, ಮೊಬೈಲ್ ಬ್ಯಾಂಕಿoಗ್ ಮೂಲಕ ಸಾಲದ ಅರ್ಜಿ ಪಡೆದು 4.90 ಲಕ್ಷ ರೂ ಜಮಾ ಮಾಡಿದ್ದಾರೆ. ಅದಾದ ನಂತರ ಆ ಹಣವನ್ನು ಸೇರಿ ಒಟ್ಟು 5 ಲಕ್ಷ ರೂಪಾಯಿಯನ್ನು ದುಷ್ಕರ್ಮಿಗಳು ತಮ್ಮ ವಿವಿಧ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಂಡಿದ್ದು, ಸಾಲ ನೀಡಿದ ಬ್ಯಾಂಕಿನವರು ಇದೀಗ ಏಕನಾಥ ಅವರ ಬೆನ್ನು ಬಿದ್ದಿದ್ದಾರೆ.