ವಿನಾಯಕ ನಾಯ್ಕ ಕೊಲೆ ಹಣಕ್ಕಾಗಿ ನಡೆದಿದೆ ಎಂಬ ಅನುಮಾನವಿತ್ತು. ಆದರೆ, ಈ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಕುಟುಂಬದವರು ಸಹ ಮಾಹಿತಿ ನೀಡುತ್ತಿರಲಿಲ್ಲ. ತನಿಖೆಗೂ ಸಹಕರಿಸುತ್ತಿರಲಿಲ್ಲ. ಅದಾಗಿಯೂ ಪೊಲೀಸರು ಚಾಣಾಕ್ಷತನದಿಂದ ಪ್ರಕರಣ ಬೇದಿಸಿದ್ದು, ಸುಪಾರಿ ಪಡೆದ ಮೂವರನ್ನು ಜೈಲಿಗಟ್ಟಿದ್ದಾರೆ. ಶಿರೂರು ಕಾರ್ಯಾಚರಣೆ ಒತ್ತಡದ ನಡುವೆಯೂ ಈ ಪ್ರಕರಣ ಬೇದಿಸಿದ ಪೊಲೀಸರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತವಾಗಿದೆ.
ಕಾರವಾರ: ಹಣಕೋಣದ ವಿನಾಯಕ ನಾಯ್ಕರನ್ನು ಸುಪಾರಿ ನೀಡಿ ಕೊಲೆ ಮಾಡಿಸಿದ್ದು ಇನ್ನೊಬ್ಬ ಉದ್ಯಮಿ ಗುರುಪ್ರಸಾದ್ ರಾಣೆ ಎಂಬುದು ಖಚಿತವಾಗಿದ್ದು, ಗುರುಪ್ರಸಾದ ರಾಣೆ ಸಹ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಸ್ಪಷ್ಠಪಡಿಸಿದ್ದಾರೆ. ಕುಟುಂಬದವರು ಗುರುಪ್ರಸಾದ ರಾಣೆ ಅವರ ಶವ ಗುರುತಿಸಿದ್ದಾರೆ.
ಹಳಗಾ ಗ್ರಾಮದ ಗುರುಪ್ರಸಾದ ರಾಣೆ ಗೋವಾದಲ್ಲಿ ನೆಲೆಸಿದ್ದು, ಗುರುಪ್ರಸಾದ ರಾಣೆ ತನ್ನ ಬಾಡಿಗಾರ್ಡ್ ಆಗಿದ್ದ ಅಸ್ಸಾಂ ಮೂಲದ ವ್ಯಕ್ತಿಗೆ ಕೊಲೆಯ ಸುಪಾರಿ ನೀಡಿದ್ದ. ಅದರ ಪ್ರಕಾರ ವಿನಾಯಕ ನಾಯ್ಕನನ್ನು ಕೊಲೆ ಮಾಡಲು ತಿಳಿಸಿದ್ದು. ಬಿಹಾರ ಮೂಲದ ಇಬ್ಬರನ್ನು ಕರೆದುಕೊಂಡ ಬಂದ ಬಾಡಿಗಾರ್ಡ ಸೆ.22ರಂದು ವಿನಾಯಕನನ್ನು ಕೊಂದು ಪರಾರಿಯಾಗಿದ್ದ. ಈ ಪ್ರಕರಣಕ್ಕೆ ಸಂಬoಧಿಸಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ವಿನಾಯಕ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಅಸ್ಸಾಂ ಮೂಲದ ಲಕ್ಷ ಜೋತಿನಾಥ್, ಬಿಹಾರ ಮೂಲದ ಅಜ್ಮಲ್ ಹಾಗೂ ಮಾಸೂಮ್ ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ್ ಸುದ್ದಿಗಾರರಿಗೆ ತಿಳಿಸಿದರು.
`ಕೊಲೆಯಾದ ವ್ಯಕ್ತಿ ವಿನಾಯಕನ ಕುಟುಂಬದವರು ಸರಿಯಾದ ಮಾಹಿತಿ ನೀಡಿರಲಿಲ್ಲ. ವೈಯಕ್ತಿಕ ವಿಚಾರ, ಕುಟುಂಬದಲ್ಲಿ ವೈವಾಹಿಕ ಜೀವನದಲ್ಲಿ ಸರಿ ಇರಲಿಲ್ಲ ಎನ್ನುವ ಮಾಹಿತಿ ಪಡೆದು ತನಿಖೆ ನಡೆಯಿತು. ಬಿಳಿ ಬಣ್ಣದ ಕಾರು ಗ್ರಾಮಕ್ಕೆ ಬಂದ ಮಾಹಿತಿ ಪಡೆದು ತನಿಖೆ ಪ್ರಾರಂಭಿಸಿದಾಗ ಪ್ರಕರಣದ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ’ ಎಂದರು. `ವಾಹನದ ನಂಬರ್ ಪಡೆದು ವಿಚಾರಿಸಿದಾಗ ಅದು ನಕಲಿ ನಂಬರ್ ಎಂದು ತಿಳಿದಿತ್ತು. ಆದರೆ ಕಾರಿನ ಹಿಂದೆ ಪ್ರವೀಣ್ ಸುಧೀರ್ ಎಂಬಾತ ಅಶೋಕ್ ರಾಣೆ ಎಂಬಾತನಿಗೆ ಮಾರಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಆತ ತಾಲೂಕಿನವನೇ ಎಂದು ಮಾಹಿತಿ ತಿಳಿದಾಗ ಆ ವಾಹನ ಗೋವಾದಲ್ಲಿ ಡಿಸ್ಟಿಲರಿ ಕಂಪನಿ ನಡೆಸುತ್ತಿದ್ದ ಗುರುಪ್ರಸಾದ್ ರಾಣೆ ಎಂಬಾತ ತೆಗೆದುಕೊಂಡು ಹೋಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿತ್ತು’ ಎಂದರು.
`ಕಾರನ್ನ ಗುರುಪ್ರಸಾದ್ ರಾಣೆಯ ಜೊತೆ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಲಕ್ಷ ಜೋತಿನಾತ್ ಎಂಬಾತ ಓಡಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದು ಆತನನ್ನ ವಿಚಾರಣೆ ಮಾಡಲು ಮುಂದಾದಾಗ ಆತ ಅಸ್ಸಾಂ ಹೋಗಲು ಸಿದ್ಧನಾಗಿದ್ದ. ಆ ವೇಳೆಯಲ್ಲಿಯೇ ಪೊಲೀಸರು ಆತನನ್ನು ವಶಕ್ಕೆ ಪಡೆದರು. ಗುರುಪ್ರಸಾದ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಜ್ಮಲ್ ಹಾಗೂ ಮಾಸೂಮ್ ಎನ್ನುವ ಬಿಹಾರ ಮೂಲದವರನ್ನ ಲಕ್ಷ ಜೋತಿನಾತ್ ಕರೆದುಕೊಂಡು ಬಂದು ವಿನಾಯಕನ ಹತ್ಯೆ ಮಾಡಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿತ್ತು’ ಎಂದರು. `ಕೊಲೆಯಾದ ನಂತರ ಕಾರನ್ನ ಪೊಂಡಾಕ್ಕೆ ತೆಗೆದುಕೊಂಡು ಹೋಗಿ ಸರ್ವಿಸ್ ಸೆಂಟರ್‌ನಲ್ಲಿ ಸ್ವಚ್ಚಗೊಳಿಸಿ ಮನೆಗೆ ತೆರಳಲು ಸಿದ್ದರಾಗಿದ್ದರು. ಲಕ್ಷ ಜೋತಿನಾಥ್‌ಗೆ ಗುರುಪ್ರಸಾದ್ ಒಂದು ಲಕ್ಷ ಹಾಗೂ ಅಜ್ಮಲ್ ಹಾಗೂ ಮಾಸೂಮ್‌ಗೆ ತಲಾ 50 ಸಾವಿರ ರೂಪಾಯಿ ಕೊಟ್ಟು ಊರಿಗೆ ತೆರಳಲು ತಿಳಿಸಿದ್ದನು. ಆದರೆ ಲಕ್ಷ ಜೋತಿನಾಥ್‌ನನ್ನು ಗೋವಾದಲ್ಲಿಯೇ ವಶಕ್ಕೆ ಪಡೆಯಲಾಗಿತ್ತು.
ಇದನ್ನೂ ಓದಿ: ಉದ್ಯಮಿ ಹೆಣ ಬಿದ್ದಿದ್ದು ಹಣಕ್ಕಾಗಿ ಅಲ್ಲ.. ಹೆಣ್ಣಿಗಾಗಿ!
ಇನ್ನು ಫೋನ್ ಡೀಟೈಲ್ಸ್ ಪಡೆದು ಅಜ್ಮಲ್ ಹಾಗೂ ಮಾಸೂಮ್ ದೆಹಲಿಗೆ ಹೋಗುತ್ತಿದ್ದ ಮಾಹಿತಿ ಪಡೆದು ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ದೆಹಲಿ ಪೊಲೀಸರ ಸಹಾಯದಿಂದ ಅಜ್ಮಲ್ ಹಾಗೂ ಮಾಸೂಮ್‌ಮನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದರು. `ಇನ್ನು ಸಾಮಾಜಿಕ ಜಾಲತಾಣದಲ್ಲಿ ಹತ್ಯೆ ಹಿಂದೆ ಗುರುಪ್ರಸಾದ್ ಇದ್ದ ಬಗ್ಗೆ ಸುದ್ದಿ ಬಂದ ಹಿನ್ನೆಲೆಯಲ್ಲಿ ತನ್ನನ್ನ ಬಂಧಿಸಬಹದು ಎನ್ನುವ ವಿಚಾರದಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ’ ಎಂದು ತಿಳಿಸಿದರು.