ಮುಂಡಗೋಡು: ಹುಬ್ಬಳ್ಳಿಯ ಗಾರ್ಡನ್ ಪೇಟೆಯಲ್ಲಿರುವ ವಸತಿ ಹಾಗೂ ವಾಣಿಜ್ಯ ಸಂಕೀರ್ಣ ಖರೀದಿ ಕಾರಣ ಮುಂಡಗೋಡು ಬಸ್ ನಿಲ್ದಾಣ ಮುಂದಿನ ಅಶ್ರತ್ ವರ್ಣೇಕರ್ (45) ಸಾವನಪ್ಪಿದ್ದಾರೆ.
ರಿಯಲ್ ಎಸ್ಟೇಟ್ ಎಜೆಂಟರಾದ ಹುಬ್ಬಳ್ಳಿಯ ಸಂಶೀದ್ಧೀನ್ ಲತೀಪ್, ಕುಶಲಚಂದ್ರ ಜೈನ್, ಉಶಾದೇವಿ ಜೈನ್, ಸಾಧಿಕ್ ಜಕಾತಿ, ಮುನಾಪ ಪಟವೇಗರ್, ಜಾವೀದ್ ಅಹ್ಮದ್ ಎಂಬಾತರು ಅಶ್ರತ್ ವರ್ಣೇಕರ್’ರನ್ನು ಪುಸಲಾಯಿಸಿ ಅವರಿಂದ ಹಣ ಪಡೆದು ಹುಬ್ಬಳ್ಳಿಯಲ್ಲಿ ವಸತಿ ಹಾಗೂ ವಾಣಿಜ್ಯ ಮಳಿಗೆ ಕೊಡಿಸಿದ್ದರು. ಆ ಮಳಿಗೆ ಮೇಲೆ ಸಾಲವಿದ್ದು, ಅದನ್ನು ತೀರಿಸುವುದಾಗಿ ಖರೀದಿ ವೇಳೆ ಮಾತು ಕೊಟ್ಟಿದ್ದರು. ಅವರ ಮೇಲಿನ ನಂಬಿಕೆಯಿAದ ಅಶ್ರತ್ ಮಳಿಗೆ ಖರೀದಿಸಿದ್ದರು.
ಆದರೆ, ಆಸ್ತಿ ಮೇಲಿನ ಸಾಲ ಮಾತ್ರ ಚುಕ್ತಾ ಆಗಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ 13 ಕೋಟಿ ರೂ ಸಾಲ ಆ ಆಸ್ತಿ ಮೇಲೆ ಇರುವ ಬಗ್ಗೆ ಗೊತ್ತಾಗಿದ್ದು, ಇದರಿಂದ ಅಶ್ರತ್ ವರ್ಣೇಕರ್ ಆತಂಕಕ್ಕೆ ಒಳಗಾದರು. ಮೊದಲಿನ ಮಾತುಕಥೆ ಪ್ರಕಾರ ಆಸ್ತಿ ಮೇಲಿನ ಸಾಲ ತೀರಿಸಿ, ಬೋಜಾ ತೆಗೆಯುವಂತೆ ಅವರು ರಿಯಲ್ ಎಸ್ಟೇಟ್ ಎಜೆಂಟರ ಬಳಿ ಅಲೆದಾಡಿದ್ದರು. ಆಗ `ಸಾಲವನ್ನು ತೀರಿಸಲ್ಲ. ಬೋಜಾವನ್ನು ತೆಗೆಯಲ್ಲ’ ಎಂದು ಆ ಎಜೆಂಟರು ಹೇಳಿದ್ದು, `ನೀ ಸತ್ತರೆ ಸಾಯಿ’ ಎಂದು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರು.
13 ಕೋಟಿ ರೂ ಸಾಲದ ಬಗ್ಗೆ ಯೋಚಿಸಿ ಮಾನಸಿಕವಾಗಿ ಕುಗ್ಗಿದ ಅಶ್ರತ್ ವರ್ಣೇಕರ್ ಸೆ 26ರಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅದನ್ನು ನೋಡಿದ ಅವರ ಪತ್ನಿ ತೇಜಶ್ವಿನಿ ತಕ್ಷಣ ಹುಬ್ಬಳ್ಳಿ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆಸಿದರು. ಆದರೆ, ಜೇನುಮುರಿ ಕ್ರಾಸ್ ಬಳಿ ಅವರು ಸಾವನಪ್ಪಿದರು.




