ಕಾರವಾರ: ಸದಾಶಿವಗಡದ ಬಾಪೂಜಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಹೃದಯ ರೋಗ ತಡೆಗೆ ಅನುಸರಿಸಬೇಕಾದ ವಿಧಾನಗಳ ಬಗ್ಗೆ ವಿವಿಧ ಕಡೆ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಿದರು.
ಸೆ 29ರಂದು ವಿಶ್ವ ಹೃದಯ ದಿನ ಆಚರಿಸಲಾಗುತ್ತಿದ್ದು ಆರೋಗ್ಯ ಇಲಾಖೆ ಹಾಗೂ ಚಿತ್ತಾಕುಲದ ಆಯುಷ್ಮಾನ್ ಆರೋಗ್ಯ ಮಂದಿರ ಸಹಯೋಗದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು. ಚಿತ್ತಾಕುಲ ಗ್ರಾ ಪಂ ಆವರಣದಲ್ಲಿ ಈ ಕಾರ್ಯಕ್ರಮ ಉದ್ಘಾಟಿಸಿದ ಗ್ರಾ ಪಂ ಉಪಾಧ್ಯಕ್ಷ ಸೂರಜ್ ದೇಸಾಯಿ `ಆರೋಗ್ಯದ ಬಗ್ಗೆ ಪ್ರತಿಯೊಬ್ಬರು ಜಾಗೃತೆವಹಿಸಬೇಕು. ಅದರಲ್ಲಿಯೂ ಮುಖ್ಯವಾಗಿ ಹೃದಯದ ಬಗ್ಗೆ ಕಾಳಜಿ ಹೊಂದಿರಬೇಕು’ ಎಂದು ಕರೆ ನೀಡಿದರು. ಶಿವಾಜಿ ಸರ್ಕಲ್ ಮಾರ್ಗವಾಗಿ ಸದಾಶಿವಗಡದವರೆಗೂ ವಿದ್ಯಾರ್ಥಿಗಳ ಮೆರವಣಿಗೆ ಸಂಚರಿಸಿತು.
ಗ್ರಾ ಪಂ ಪಿಡಿಓ ರಾಮದಾಸ ನಾಯ್ಕ, ಬಾಪೂಜಿ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯೆ ರೇಷ್ಮಾ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಸುಪ್ರಿಯಾ ನಾಯಕ್, ಆಯುಷ್ಮಾನ್ ಆರೋಗ್ಯ ಮಂದಿರದ ಸಮುದಾಯ ಆರೋಗ್ಯಾಧಿಕಾರಿ ನಾಗರತ್ನ ನಾಯ್ಕ ಜಾಥಾದಲ್ಲಿ ಸಂಚರಿಸಿ ಅರಿವು ಮೂಡಿಸಿದರು. ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತರು, ಗ್ರಾ ಪಂ ಸದಸ್ಯರು ಸಹ ಭಾಗವಹಿಸಿದ್ದರು.