ಶಿರಸಿ: ಅತ್ಯಾಚಾರಕ್ಕೆ ಒಳಗಾಗಿದ್ದ ಬುದ್ದಿಮಾಂದ್ಯ ಯುವತಿಗೆ ನ್ಯಾಯ ಕೊಡಿಸಲು ಹೋರಾಡಿದ ನ್ಯಾಯವಾದಿ ರಾಜೇಶ್ ಎಂ ಮಳಗಿಕರ್ ಕೊನೆಗೂ ಅತ್ಯಾಚಾರಿಗೆ ಕಠಿಣ ಕಾರಾಗೃಹ ಶಿಕ್ಷೆ ವಿಧಿಸುವಂತೆ ವಾದ ಮಂಡಿಸಿದರು.
ಅತ್ಯಾಚಾರಿ ವೀರಭದ್ರ ತಿಮ್ಮ ನಾಯ್ಕ (55) ವರ್ತನೆಯ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟ ಅವರು ಕ್ರೂರ ವ್ಯಕ್ತಿತ್ವದ ಆಪಾದಿತನಿಗೆ ಕಠಿಣ ಶಿಕ್ಷೆ ಪ್ರಕಟಿಸುವಂತೆ ಮನವಿ ಮಾಡಿದರು. ಅದರ ಪ್ರಕಾರ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಿರಣ್ ಕಿಣಿ ಅವರು ಅತ್ಯಾಚಾರಿಗೆ 10 ವರ್ಷಗಳ ಜೈಲು, 30 ಸಾವಿರ ರೂ ದಂಡ ಹಾಗೂ ಸಂತ್ರಸ್ತೆಗೆ 50 ಸಾವಿರ ರೂ ಪರಿಹಾರ ವಿಧಿಸಿ ತಮ್ಮ ತೀರ್ಪು ಪ್ರಕಟಿಸಿದರು.
2020ರಲ್ಲಿ ವೀರಭದ್ರ ತಿಮ್ಮ ನಾಯ್ಕ ಬುದ್ದಿಮಾಂದ್ಯ ಯುವತಿಗೆ ಚಾಕಲೇಟ್ ಕೊಡಿಸುವುದಾಗಿ ನಂಬಿಸಿ ಕಾಡಿಗೆ ಕರೆದೊಯ್ದಿದ್ದ. ಅಲ್ಲಿ ಆಕೆಯ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖಾಧಿಕಾರಿ ಮಹೇಶ್ ಎಂಬಾತರು ವಿವಿಧ ಬಗೆಯಲ್ಲಿ ಸಾಕ್ಷಿಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ವಾದ-ವಿವಾದವನ್ನು ಆಲಿಸಿ, ಆದೇಶ ಹೊರಡಿಸಿದೆ.
ಲಭ್ಯವಿರುವ ಸಾಕ್ಷಿಗಳ ಆಧಾರಗಳನ್ನು ಮುಂದಿರಿಸಿಕೊoಡು ಸರ್ಕಾರಿ ನ್ಯಾಯವಾದಿ ರಾಜೇಶ್ ಎಂ ಮಳಗಿಕರ್ ಸಾಕಷ್ಟು ವಾದ ಮಾಡಿದರು. ಆರೋಪಿಯ ಹಿನ್ನಲೆ ಹಾಗೂ ಲಭ್ಯವಿರುವ ದಾಖಲೆಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕಿರಣ್ ಕಿಣಿ ಅವರು ವೀರಭದ್ರ ತಿಮ್ಮ ನಾಯ್ಕ ತಪ್ಪಿತಸ್ಥ ಎಂದು ರುಜು ಮಾಡಿದ್ದು, ಅಂತಿಮವಾಗಿ ಆತನಿಗೆ 10 ವರ್ಷಗಳ ಕಾಲದ ಕಠಿಣ ಕಾರಾಗೃಹ ಶಿಕ್ಷೆಯನ್ನು ನೀಡಿದರು. ಜೊತೆಗೆ 30 ಸಾವಿರ ರೂ ದಂಡವನ್ನು ಪಾವತಿಸುವಂತೆ ಆದೇಶಿಸಿದರು. ಅನ್ಯಾಯಕ್ಕೆ ಒಳಗಾದ ಸಂತ್ರಸ್ತೆಗೆ 50 ಸಾವಿರ ರೂ ಪರಿಹಾರವನ್ನು ಆಪಾಧಿತ ನೀಡಬೇಕು ಎಂದು ತಮ್ಮ ನ್ಯಾಯವನ್ನು ಪ್ರಕಟಿಸಿದರು.
ಸಂತ್ರಸ್ತೆ ಪರ ವಾದ ಮಾಡಿದ ನ್ಯಾಯವಾದಿ ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ…



