ಕಾರವಾರ: `ಬಿಜೆಪಿಯವರ ಕಿರಿಕಿರಿ ಸಹಿಸಲಾಗದೇ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅಮ್ಮನವರು ಎಲ್ಲಾ ಸೈಟುಗಳನ್ನು ಮರಳಿಸಿದ್ದಾರೆ’ ಎಂದು ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು `ಬಿಜೆಪಿಯವರಿಗೆ ಸುಳ್ಳು ಹೇಳುವುದನ್ನು ಬಿಟ್ಟು ಬೇರೆನೂ ಗೊತ್ತಿಲ್ಲ. ಸಿದ್ದರಾಮಯ್ಯ ಅವರ ಪತ್ನಿ ಅಧಿಕೃತವಾಗಿ ಸೈಟ್ ಖರೀದಿಸಿದರೂ ಅದನ್ನು ಬಿಜೆಪಿಯವರಿಂದ ಸಹಿಸಿಕೊಳ್ಳಲು ಆಗಲಿಲ್ಲ. ಅವರ ಕಾಟ ತಡೆಯಲಾರದೇ ಅಮ್ಮನವರು ಸೈಟ್ ಹಿಂತಿರುಗಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಗೊತ್ತಿಲ್ಲದೇ ಈ ಸೈಟ್ ಮರಳಿಸಿದ್ದಾರೆ’ ಎಂದು ಅವರು ಹೇಳಿದರು.
`ಅಮ್ಮನವರಿಗೆ ಎಂದಿಗೂ ಆಸ್ತಿ ಮುಖ್ಯವಲ್ಲ. ಅವರ ಮನೆಯವರು ಹಾಗೂ ರಾಜ್ಯದ ಹಿತ ಮುಖ್ಯ. ಅಭಿವೃದ್ಧಿ ಕೆಲಸಗಳು ಮುಖ್ಯ. ಹೀಗಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ’ ಎಂದು ತಿಳಿಸಿದರು. ಬಿಜೆಪಿಯವರ ಭಾಷೆ ಸಹಿಸಲಾಗುತ್ತಿಲ್ಲ. ಅವರು ಈ ಪ್ರಕರಣ ಇಲ್ಲಿಗೆ ಕೈ ಬಿಟ್ಟು ಅಭಿವೃದ್ಧಿಗೆ ಸಹಕಾರ ನೀಡಬೇಕು. ಕೆಲಸ ಮಾಡಲು ಅವಕಾಶ ಕೊಡಬೇಕು’ ಎಂದು ಮನವಿ ಮಾಡಿದರು. `ಅಮ್ಮನವರು ತಪ್ಪು ಮಾಡಿಲ್ಲ. ತಪ್ಪು ಮಾಡುವುದೂ ಇಲ್ಲ’ ಎಂದು ಸಮರ್ಥಿಸಿಕೊಂಡರು.
ಮಾಹಿತಿ ಹಕ್ಕು ಅರ್ಜಿ ಸಲ್ಲಿಸುವ ಸಚಿವ!
ಪ್ಲಾಸ್ಟಿಕ್ ಮುಕ್ತ ಮಾಡುವ ಯೋಜನೆಗೆ 850 ಕೋಟಿ ರೂ ಹಣ ಬಂದಿರುವ ಬಗ್ಗೆ ಪ್ರಶ್ನಿಸಿದಾಗ ಆ ಹಣವನ್ನು ಕೇಂದ್ರ ಸರ್ಕಾರ ಕೊಟ್ಟಿಲ್ಲ. ನಮಗೆ ಅರಿವಿಲ್ಲದೇ ಕೇಂದ್ರ ಸರ್ಕಾರ ಬೇರೆ ಬೇರೆ ಖಾತೆಗೆ ಹಣ ಹಾಕಿ ಲಪಟಾಯಿಸಿದ್ದರೆ ಅದನ್ನು ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿ ದಾಖಲೆ ಪಡೆಯಬೇಕು’ ಎಂದು ಹೇಳಿದರು.
ಸಿ ಆರ್ ಜಡ್ ಅನುಮತಿ ಇಲ್ಲದೇ ಅಭಿವೃದ್ಧಿಗೆ ಬಂದ ಹಣ ಹಿಂತಿರುಗಿದೆ. ಕಾರವಾರದಿಂದ ಭಟ್ಕಳದವರೆಗೆ 320 ಕಿಮೀ ಕಡಲ ಕೊರೆತ ತಡೆಗೆ ಯೋಜನೆ ರೂಪಿಸಲಾಗಿದೆ. ಇದರೊಂದಿಗೆ ಬಂದರು ಅಭಿವೃದ್ಧಿ ಹಾಗೂ ಅಲ್ಲಿನ ಹೂಳು ತೆಗೆಯಲು ಶ್ರಮಿಸಲಾಗುತ್ತದೆ’ ಎಂದರು.
ದುಡ್ಡು ಮಾಡಲು ಬಂದವರು ಯಾರು?
`ಐ ಆರ್ ಬಿ ಕಂಪನಿಯವರು ದುಡ್ಡು ಮಾಡಲು ಇಲ್ಲಿ ಬಂದಿದ್ದಾರೆ. ಕೇಂದ್ರ ಸಚಿವರು ಆ ಕಂಪನಿಯ ಪಾಲುದಾರರಂತೆ. ಹೀಗಾಗಿ ಕೆಲ ಜನಪ್ರತಿನಿಧಿಗಳು-ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ.
ಮರಳುಗಾರಿಕೆ ಸಮಸ್ಯೆ
`ಬಿಜೆಪಿ ಮುಖಂಡರು ಹಸಿರುಪೀಠಕ್ಕೆ ಹೋಗಿದ್ದರಿಂದ ಮರಳುಗಾರಿಕೆಗೆ ತಡೆಯಾಗಿದೆ. ಅವರು ದೂರು ಹಿಂಪಡೆದರೆ ಮರಳುಗಾರಿಕೆಗೆ ಅನುಮತಿ ಸಿಗಲಿದೆ. ಇದರಿಂದ ಸರ್ಕಾರಕ್ಕೂ ಆದಾಯಬರಲಿದೆ. ಜನರಿಗೂ ನೆರವು ಸಿಗಲಿದೆ’ ಎಂದರು.
ಸುಸಜ್ಜಿತ ಆಸ್ಪತ್ರೆ ಸೇರಿ ಹಲವು ವಿಷಯಗಳ ಬಗ್ಗೆ ಸಚಿವ ಮಂಕಾಳು ವೈದ್ಯ ಮಾತನಾಡಿದ ವಿಡಿಯೋ ಇಲ್ಲಿ ನೋಡಿ…



