ಕಳೆದ ವರ್ಷ ಧಾರವಾಡದಲ್ಲಿ ಸೊಪ್ಪಿನ ಮೇಳ ನಡೆದಿತ್ತು. ಸೊಪ್ಪಿನಿಂದಲೇ ತಯಾರಿಸಿದ 30ಕ್ಕೂ ಅಧಿಕ ಅಡುಗೆಗಳು ಗಮನ ಸೆಳೆಯುತ್ತಿದ್ದವು. ಉತ್ತರ ಕನ್ನಡ ಸಹ ಈ ಬಗೆಯ ಸ್ಪರ್ಧೆ ಹಾಗೂ ಪ್ರದರ್ಶನ ನಡೆಯಲು ಯೋಗ್ಯ ಸ್ಥಳ.
ಧಾರವಾಡದಲ್ಲಿ ನಡೆದಿದ್ದು ಬಹುಶಃ ರಾಜ್ಯದ ಮೊದಲ ಸೊಪ್ಪಿನ ಮೇಳ ಆಗಿರಬೇಕು. ಇಲ್ಲಿ ಮೇಳಗಳಿಗೆ ಕಳೆ ಕಟ್ಟಿದ್ದು ಅಡುಗೆ ಸ್ಪರ್ಧೆಗಳಿಂದ. ಈ ಸ್ಪರ್ಧೆ ಪರಿಣಾಮವಾಗಿ ಸೊಪ್ಪು, ಗೆಡ್ಡೆ-ಗೆಣಸು ಅಡುಗೆ ಮನೆಗೆ ಬಂದರೆ ಮಾತ್ರ ಈ ಮೇಳದ ನೈಜ ಯಶಸ್ಸು ಸಾಧ್ಯ. ಅಡುಗೆ ಮನೆಯ ಒಡತಿಯರು ಸೊಪ್ಪಿನ ಮೇಳಕ್ಕೆ ಬಂದರೆ ಅದನ್ನು ತಿಂದು ಚಪ್ಪರಿಸುವ ಮನೆಯ ಸಮಸ್ತರೂ ಬಂದೇ ಬರುತ್ತಾರೆ!
ಸೊಪ್ಪಿನ ಪಲ್ಯ, ಸೊಪ್ಪಿನ ಸಾರು, ಸೊಪ್ಪಿನ ಚಟ್ನಿ, ಕರಿಬೇವಿನ ಚಟ್ನಿ ಪುಡಿ, ನುಗ್ಗೆ ಸೊಪ್ಪಿನ ಪಡ್ಡು, ದಾಸವಾಳದ ಸೊಪ್ಪಿನ ದೋಸೆ, ಸೊಪ್ಪಿನ ಪಚಡಿ, ಸೊಪ್ಪಿನ ಡೊಕಳಾ, ಕೊನೆಗೆ ಕೆಂಪು ಅರಿವೆ ಸೊಪ್ಪಿನ ಕೇಕ್ ಕೂಡ ಸೊಪ್ಪಿನ ಸ್ಪರ್ಧೆಗಳಲ್ಲಿ ಗಮನ ಸೆಳೆಯುವಂಥಹುದು. ಆಗ, ಮೊದಲ ಬಹುಮಾನ ಪಡೆದ 85 ವರ್ಷದ ಹಿರಿಯಜ್ಜಿ ಪ್ರತಿಮಾ ಫವಾರ್ ಪಡೆದಿದ್ದು ಇನ್ನೊಂದು ವಿಶೇಷ.
`ಟಿವಿ ನೋಡಿ ಅಡುಗೆ ಮಾಡೋದು ಕಲಿಯಂಗಿಲ್ರಿ. ನಮ್ಮ ಬುದ್ದಿ ಉಪಯೋಗಿಸಿ ಅಡುಗಿ ಮಾಡಬೇಕು’ ಎಂದು ಅವರು ಹೇಳಿದಾಗ ಆ ಮಾತು ಸತ್ಯ ಎನಿಸಿತು. ಅವರ ಆಸಕ್ತಿ ಮತ್ತು ಜೀವನೋತ್ಸಾಹಕ್ಕೆ ನಾವೆಲ್ಲರೂ ಮನಸೋತ ನೆನಪು ಸೊಪ್ಪಿನಷ್ಟೇ ಹಸಿರಾಗಿದೆ. ನಿಮ್ಮೂರಲ್ಲೂ ಸೊಪ್ಪು ಮೇಳ ಮಾಡುವ ಕನಸು ಕಾಣಿ. ನಾವು ಬರುತ್ತೇವೆ!
– ಕೃಷ್ಣ ಪ್ರಸಾದ