ಶಿರಸಿ: ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಯುರೋಲಜಿಸ್ಟ್ ಡಾ ಗಜಾನನ ಭಟ್ಟ ಅವರನ್ನು ಬಳ್ಳಾರಿಗೆ ವರ್ಗಾಯಿಸಲಾಗಿದ್ದು, ಇದನ್ನು ಕಾರವಾರದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಖಂಡಿಸಿದ್ದಾರೆ.
`ಜನಪ್ರತಿನಿಧಿಗಳು ಉತ್ತಮ ವೈದ್ಯರನ್ನು ಜಿಲ್ಲೆಯಲ್ಲಿ ಉಳಿಸಿಕೊಳ್ಳಬೇಕು. ಒಳ್ಳೆಯ ವೈದ್ಯರನ್ನು ಜಿಲ್ಲೆಗೆ ತರಲು ಸಾಧ್ಯವಾಗದೇ ಇದ್ದರೆ ಇದ್ದವರನ್ನು ಬೇರೆ ಕಡೆ ವರ್ಗಾಯಿಸುವ ಖಯಾಲಿಯನ್ನಾದರೂ ಬಿಡಬೇಕು’ ಎಂದವರು ಹೇಳಿದ್ದಾರೆ. `ಮೂತ್ರಕೋಶದ ಎಲ್ಲಾ ಸಮಸ್ಯೆಗಳಿಗೂ ಡಾ ಗಜಾನನ ಭಟ್ಟ ಅವರು ಆಧಾರವಾಗಿದ್ದರು. ಕಿಡ್ನಿಯಲ್ಲಿ ಕಲ್ಲು ಬೆಳೆದವರ ಸಮಸ್ಯೆ ಆಲಿಸಿ ಅವರು ಪರಿಹರಿಸುತ್ತಿದ್ದರು. ಇಡೀ ಉತ್ತರ ಕನ್ನಡ ಜಿಲ್ಲೆಯಲ್ಲಿ ಡಾ ಗಜಾನನ ಭಟ್ ಮಾತ್ರ ಯುರೋಲಜಿಸ್ಟ್ ಇದ್ದು, ಅವರನ್ನು ವರ್ಗಾಯಿಸಿರುವುದು ಸರಿಯಲ್ಲ’ ಎಂದು ಮಾಧವ ನಾಯಕ ಹೇಳಿದ್ದಾರೆ.
`ಡಾ ಗಜಾನನ ಭಟ್ ಅವರು ಶಿರಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ವಾರಕ್ಕೊಮ್ಮೆ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಬರುತ್ತಿದ್ದರು. ಇದರಿಂದ ಕಾರವಾರದ ರೋಗಿಗಳಿಗೆ ಸಹ ಅನುಕೂಲವಾಗಿದ್ದು, ಇದೀಗ ಅವರ ವರ್ಗಾವಣೆ ನಡೆದರೆ ಅನೇಕರಿಗೆ ಸಮಸ್ಯೆ ಆಗಲಿದೆ. ಅವರನ್ನು ಜಿಲ್ಲೆಯ ಒಳಗೆ ವರ್ಗಾಯಿಸಿದರೆ ಯಾರ ತಕರಾರು ಇಲ್ಲ. ಆದರೆ, ಬೇರೆ ಜಿಲ್ಲೆಗೆ ವರ್ಗಾಯಿಸುವುದಕ್ಕೆ ವಿರೋಧವಿದೆ’ ಎಂದು ಅವರು ವಿವರಿಸಿದ್ದಾರೆ.
`ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರು ಡಾ ಗಜಾನನ ನಾಯ್ಕ ಅವರ ವರ್ಗಾವಣೆ ತಡೆಹಿಡಿಯಬೇಕು. ಅದಾಗಿಯೂ ವರ್ಗಾವಣೆ ನಡೆದಲ್ಲಿ ಪ್ರತಿಭಟನೆ ಅನಿವಾರ್ಯ’ ಎಂದು ಮಾಧವ ನಾಯಕ ಎಚ್ಚರಿಸಿದ್ದಾರೆ.