ಹಾವೇರಿ: ಅಕ್ರಮ ಮರಳು ಸಂಗ್ರಹದ ವಿರುದ್ಧ ಕಂದಾಯ ಅಧಿಕಾರಿಗಳ ದಾಳಿ; 146 ಮೆಟ್ರಿಕ್ ಟನ್ ಮರಳು ಜಪ್ತಿ!
ಹಾವೇರಿ: ಅಕ್ರಮವಾಗಿ ಮರಳು ಸಂಗ್ರಹಿಸಿರುವುದರ ವಿರುದ್ಧ ಕಾರ್ಯಾಚರಣೆ ನಡೆಸಿದ ಕಂದಾಯ ಅಧಿಕಾರಿಗಳು, ಹಾವೇರಿ ತಾಲೂಕಿನ ಹರಳಹಳ್ಳಿ ಗ್ರಾಮದ ಬಳಿಯ ತುಂಗಭದ್ರಾ ನದಿ ತೀರದಲ್ಲಿ ಬರೋಬ್ಬರಿ 146 ಮೆಟ್ರಿಕ್ ಟನ್ ಮರಳನ್ನು ಜಪ್ತಿ ಮಾಡಿದ್ದಾರೆ.
ಹರಳಹಳ್ಳಿ ಗ್ರಾಮದ ಸಮೀಪದ ತುಂಗಭದ್ರಾ ನದಿ ತೀರದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಹಾವೇರಿ ತಹಸೀಲ್ದಾರ್ ಶರಣಮ್ಮ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ರಾತ್ರಿಯಿಡೀ ನದಿ ತೀರದಲ್ಲೇ ಬೀಡುಬಿಟ್ಟ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ವಶಕ್ಕೆ ಪಡೆದಿದ್ದಾರೆ.
ಲಕ್ಷಾಂತರ ರೂಪಾಯಿ ಮೌಲ್ಯದ ಮರಳು ವಶಕ್ಕೆ
ಕಾರ್ಯಾಚರಣೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ 146 ಮೆಟ್ರಿಕ್ ಟನ್ ಮರಳನ್ನು ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡ ಮರಳನ್ನು ಅಧಿಕಾರಿಗಳು ಗುತ್ತಲ ಪೊಲೀಸ್ ಠಾಣೆಯ ಸುಪರ್ದಿಗೆ ನೀಡಿದ್ದಾರೆ.
ಅಕ್ರಮ ಮರಳು ಸಾಗಣೆಗೆ ಕಡಿವಾಣ ಹಾಕಲು ಕ್ರಮ
ತುಂಗಭದ್ರಾ ನದಿ ತೀರದಲ್ಲಿ ಅಕ್ರಮವಾಗಿ ಮರಳು ಸಂಗ್ರಹಣೆ ಹಾಗೂ ಸಾಗಣೆ ನಡೆಯುತ್ತಿರುವುದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಂದಾಯ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ. ಅಕ್ರಮ ಮರಳು ದಂಧೆಯ ವಿರುದ್ಧ ಅಧಿಕಾರಿಗಳ ಕಾರ್ಯಾಚರಣೆ ಮುಂದುವರಿದಿದೆ.







