ಸಿದ್ದರಾಮಯ್ಯ ತೇಜೋವಧೆ ಸಫಲವಾಗಲ್ಲ, ಸ್ಟಿಂಗ್ ಆಪರೇಶನ್ ಅಸಹ್ಯಕರ: ಹೆಚ್.ಕೆ. ಪಾಟೀಲ್
ಹಾವೇರಿ: ರಾಜ್ಯದಲ್ಲಿ ಸ್ಟಿಂಗ್ ಆಪರೇಶನ್ ವಿಚಾರವಾಗಿ ನಡೆಯುತ್ತಿರುವ ಚರ್ಚೆ ಅಸಹ್ಯಕರ ಹಾಗೂ ಕೀಳು ಅಭಿರುಚಿಯದ್ದು ಎಂದು ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಹೇಳಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಇನ್ನೊಬ್ಬರ ದೌರ್ಬಲ್ಯವನ್ನು ಬಳಸಿಕೊಂಡು ಅವರನ್ನು ಅಪಮಾನಿಸುವುದು ಹಾಗೂ ಚಾರಿತ್ರ್ಯಹರಣಕ್ಕೆ ಮುಂದಾಗುವುದು ಸರಿಯಲ್ಲ. ಮತ್ತೊಬ್ಬರ ಮುಖಕ್ಕೆ ಮಸಿ ಬಳಿಯುವ ಪ್ರಯತ್ನವನ್ನು ಯಾರೂ ಒಪ್ಪುವುದಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ನಾಯಕರಾಗಿದ್ದು, ಅವರ ತೇಜೋವಧೆ ಮಾಡುವ ಮೂಲಕ ತಾತ್ಕಾಲಿಕ ರಾಜಕೀಯ ಲಾಭ ಪಡೆಯಲು ಸಾಧ್ಯವಿಲ್ಲ. ಅವರ ಚಾರಿತ್ರ್ಯವಧೆ ಮಾಡುವ ಉದ್ದೇಶದಿಂದ ಯಾರೇ ಪ್ರಯತ್ನಿಸಿದರೂ ಅದು ಸಫಲವಾಗುವುದಿಲ್ಲ. ಇಂತಹ ಪ್ರಯತ್ನಗಳಿಗೆ ಇಂಬು ನೀಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಯಾರೇ ತಪ್ಪು ಮಾಡಿದ್ದರೂ ಈ ಕುರಿತು ಸಮಗ್ರ ತನಿಖೆ ನಡೆಯಬೇಕು. ತನಿಖೆಯ ಮೂಲಕ ಸತ್ಯ ಹೊರಬಂದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಕಾಯಬೇಕು. ಆದರೆ, ಆದಷ್ಟು ಬೇಗ ಸತ್ಯ ಹೊರಬರಲಿ ಎಂದು ಹೆಚ್.ಕೆ. ಪಾಟೀಲ್ ಹೇಳಿದರು.
ಸಿದ್ದರಾಮಯ್ಯ ಅವರ ಚಾರಿತ್ರ್ಯಹರಣದ ಪ್ರಯತ್ನ ಖಂಡನೀಯವಾಗಿದ್ದು, ಇಂತಹ ಬೆಳವಣಿಗೆಗಳ ವಿರುದ್ಧ ನಮ್ಮ ಪಕ್ಷ ಹಾಗೂ ನಾವು ಆಕ್ರೋಶ ವ್ಯಕ್ತಪಡಿಸುತ್ತಿದ್ದೇವೆ. ಈ ಪ್ರಕರಣದಲ್ಲಿ ಸತ್ಯಾಂಶ ಹೊರಬರಲು ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದರು.








