ಲೋಡ್ ಶೆಡ್ಡಿಂಗ್ನಿಂದ ಶಾರ್ಟ್ ಸರ್ಕ್ಯೂಟ್? ಕಟಾವಿಗೆ ಬಂದಿದ್ದ 2 ಎಕರೆ ಕಬ್ಬು ಬೆಂಕಿಗಾಹುತಿ!
ರಾಣೆಬೆನ್ನೂರು: ಅನಿಯಮಿತ ಲೋಡ್ ಶೆಡ್ಡಿಂಗ್ನಿಂದ ಉಂಟಾದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಕಟಾವಿಗೆ ಬಂದಿದ್ದ ಎರಡು ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿ ಸುಟ್ಟು ಭಸ್ಮವಾಗಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ನಡೆದಿದೆ.
ಹುಲಿಕಟ್ಟಿ ಗ್ರಾಮದ ಬಸಪ್ಪ ಹನುಮಪ್ಪ ಹೊಸಳ್ಳಿ ಅವರಿಗೆ ಸೇರಿದ ಕಬ್ಬಿನ ಬೆಳೆಗೆ ಬೆಂಕಿ ತಗುಲಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಕಟಾವಿಗೆ ಸಿದ್ಧವಾಗಿದ್ದ ಕಬ್ಬು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಂಪೂರ್ಣ ಸುಟ್ಟುಹೋಗಿದೆ ಎಂದು ತಿಳಿದುಬಂದಿದೆ.
ಸುಮಾರು ₹10 ಲಕ್ಷ ಆದಾಯದ ನಿರೀಕ್ಷೆ ನಷ್ಟ
ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬಿನಿಂದ ಸುಮಾರು 10 ಲಕ್ಷ ರೂಪಾಯಿ ಆದಾಯದ ನಿರೀಕ್ಷೆ ಇತ್ತು ಎನ್ನಲಾಗಿದೆ. ಆದರೆ, ಬೆಂಕಿ ಅವಘಡದಿಂದ ರೈತರ ಕೈಗೆ ಬಂದಿದ್ದ ಬೆಳೆ ನಾಶವಾಗಿದ್ದು, ಅಪಾರ ಆರ್ಥಿಕ ನಷ್ಟ ಎದುರಾಗಿದೆ.
ಕಣ್ಣೆದುರೇ ಬೆಳೆ ಬೆಂಕಿಗೆ ಆಹುತಿಯಾಗಿರುವುದನ್ನು ಕಂಡ ರೈತ ಬಸಪ್ಪ ಹನುಮಪ್ಪ ಹೊಸಳ್ಳಿ ಅವರು ಕಣ್ಣೀರು ಹಾಕಿದ್ದಾರೆ. ಬೆಳೆಗಾಗಿ ಮಾಡಿದ ಖರ್ಚು ಹಾಗೂ ಆದಾಯದ ನಿರೀಕ್ಷೆ ಎಲ್ಲವೂ ಬೆಂಕಿಯಲ್ಲಿ ಸುಟ್ಟುಹೋಗಿರುವುದರಿಂದ ರೈತ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸೂಕ್ತ ಪರಿಹಾರಕ್ಕೆ ರೈತರ ಆಗ್ರಹ
ಘಟನೆಗೆ ಸಂಬಂಧಿಸಿದಂತೆ ವಿದ್ಯುತ್ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಬೆಂಕಿ ಅವಘಡಕ್ಕೆ ನಿಖರ ಕಾರಣ ಪತ್ತೆಹಚ್ಚಿ, ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ವಿದ್ಯುತ್ ವ್ಯತ್ಯಯ ಹಾಗೂ ಬೆಂಕಿ ಅವಘಡದಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಸಂಬಂಧಪಟ್ಟ ಇಲಾಖೆ ನೆರವು ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ.







