ಸಿನಿಮಾ ಶೂಟಿಂಗ್ ನೋಟುಗಳನ್ನೇ ಖೋಟಾನೋಟುಗಳಂತೆ ಚಲಾವಣೆ! ಬ್ಯಾಂಕ್‌ನಲ್ಲಿ ₹38 ಸಾವಿರ ಜಮೆ ಮಾಡಲು ಯತ್ನ; ಇಬ್ಬರ ಬಂಧನ
ಹಾವೇರಿ: ಸಿನಿಮಾ ಶೂಟಿಂಗ್‌ಗಾಗಿ ಬಳಸುವ ನೋಟುಗಳನ್ನೇ ಅಸಲಿ ನೋಟುಗಳಂತೆ ಬಳಸಿ ಬ್ಯಾಂಕ್‌ನಲ್ಲಿ ಚಲಾವಣೆ ಮಾಡಲು ಯತ್ನಿಸಿದ ಪ್ರಕರಣ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿರುವ ಪೊಲೀಸರು, ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಸಿನಿಮಾ ಬಳಕೆಯ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಣೇಬೆನ್ನೂರು ನಗರದ ಐಸಿಐಸಿಐ ಬ್ಯಾಂಕ್ ಎಟಿಎಂನಲ್ಲಿ ₹500 ಮುಖಬೆಲೆಯ 76 ನೋಟುಗಳನ್ನು ಜಮೆ ಮಾಡಲು ಯತ್ನಿಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಒಟ್ಟು ₹38 ಸಾವಿರ ಮೌಲ್ಯದ ಈ ನೋಟುಗಳ ಕುರಿತು ಪರಿಶೀಲನೆ ನಡೆಸಿದಾಗ ಅವು ಅಸಲಿ ನೋಟುಗಳಲ್ಲ, ಸಿನಿಮಾ ಶೂಟಿಂಗ್‌ಗಾಗಿ ಬಳಸುವ ನೋಟುಗಳು ಎಂಬುದು ತಿಳಿದುಬಂದಿದೆ.
₹15 ಲಕ್ಷ ಮೌಲ್ಯದ ಸಿನಿಮಾ ನೋಟುಗಳು ಸೀಜ್!

ಸಿನಿಮಾ ಚಿತ್ರೀಕರಣದ ವೇಳೆ ಬಳಸುವ ನೋಟುಗಳನ್ನು ಬ್ಯಾಂಕ್‌ನಲ್ಲಿ ಚಲಾವಣೆಗೆ ಬಳಸಲು ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಸಿನಿಮಾ ಬಳಕೆಯ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.
ಇಬ್ಬರು ಆರೋಪಿಗಳ ಬಂಧನ

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲತೇಶ ಹಾಗೂ ಸುರೇಶ ಎಂಬುವವರನ್ನು ಪೊಲೀಸರು ಬಂಧಿಸಿದ್ದು, ಈ ಸಂಬಂಧ ರಾಣೇಬೆನ್ನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ಈ ನೋಟುಗಳನ್ನು ಎಲ್ಲಿಂದ ತಂದಿದ್ದರು, ಇನ್ನೆಲ್ಲಾದರೂ ಇಂತಹ ನೋಟುಗಳನ್ನು ಚಲಾವಣೆಗೆ ಬಳಸಲು ಯತ್ನಿಸಿದ್ದಾರೆಯೇ ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸಿನಿಮಾ ಶೂಟಿಂಗ್‌ಗಾಗಿ ತಯಾರಿಸಿದ ನೋಟುಗಳನ್ನು ಅಸಲಿ ಹಣದಂತೆ ಬಳಸಲು ಯತ್ನಿಸಿದ ಈ ಪ್ರಕರಣ ಇದೀಗ ಸಾರ್ವಜನಿಕರ ಗಮನ ಸೆಳೆದಿದೆ.







