ಕುಮಟಾ: ನಿತ್ಯ ಅಪಘಾತವಾಗುವ ಸ್ಥಳದ ಬಗ್ಗೆ ಮುನ್ನಚ್ಚರಿಕೆವಹಿಸಿ ನಾಮಫಲಕ ಅಳವಡಿಸುವಂತೆ ಮನವಿ ಮಾಡಿದರೂ ನಿರ್ಲಕ್ಷಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರವರು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದಾರೆ.
ಅಘನಾಶಿನಿ ಬಳಿಯ ಜನತಾ ಪ್ಲಾಟಿನ ಶಾಲಾ ಆವರಣ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಕ್ರಮ ಜರುಗಿಸುವಂತೆ ಈ ಮೊದಲು ಊರಿನವರು ಅಧಿಕಾರಿಗಳ ಬಳಿ ಮನವಿ ಮಾಡಿದ್ದರು. `ರಸ್ತೆಯಲ್ಲಿ ಹಂಪ್ ಇಲ್ಲದ ಕಾರಣ ವಾಹನ ಸವಾರರು ವೇಗವಾಗಿ ಬರುತ್ತಿದ್ದು, ನಿತ್ಯ ಅಪಘಾತವಾಗುತ್ತಿದೆ. ಇಲ್ಲಿ ಶಾಲೆಯೂ ಇದ್ದು, ಶಾಲೆ ಇರುವ ಬಗ್ಗೆ ಸೂಚನಾ ಫಲಕ ಅಳವಡಿಸಬೇಕು’ ಎಂದು ಆಗ್ರಹಿಸಿದ್ದರು. ಆದರೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಮನವಿ ಆಲಿಸಿರಲಿಲ್ಲ.
ನಿತ್ಯ ಒಂದಿಲ್ಲೊoದು ಅಪಘಾತ ನಡೆಯುವುದರಿಂದ ಜನ ಮಾತ್ರವಲ್ಲದೇ ಜಾನುವಾರುಗಳಿಗೆ ಸಹ ಸಮಸ್ಯೆ ಆಗಿತ್ತು. ಈ ಬಗ್ಗೆ ವಿವರಿಸಿದರೂ ಕುಮಟಾ ಲೋಕೋಪಯೋಗಿ ಇಲಾಖೆ ಸ್ಪಂದಿಸಿರಲಿಲ್ಲ. ಹೀಗಾಗಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗ್ಸ ಈ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದಾರೆ. `ನಾಲ್ಕು ತಿಂಗಳ ಹಿಂದೆಯೇ ಸಮಸ್ಯೆ ಬಗ್ಗೆ ವಿವರಿಸಿದರೂ ಅಧಿಕಾರಿಗಳು ಕ್ರಮ ಜರುಗಿಸಿಲ್ಲ. ನಿಯಮಗಳ ಪ್ರಕಾರ ಹಿಂಬರಹವನ್ನು ಸಹ ನೀಡಿಲ್ಲ. ಕುಮಟಾ ಪಟ್ಟಣದಿಂದ 2ಕಿಮೀ ದೂರವಿರುವ ರಸ್ತೆಯಿಂದ ಅಘನಾಶಿನಿ ಕೊನೆಯವರೆಗೆ ತಲುಪಿ ತದಡಿ ಬಾರ್ಜಿನ ಮೂಲಕ ಗೋಕರ್ಣ ತಲುಪಬಹುದಾಗಿದ್ದು, ನಿತ್ಯ ಸಾವಿರಾರು ಜನ ಓಡಾಡುವ ರಸ್ತೆ ಬಗ್ಗೆ ಅಧಿಕಾರಿಗಳು ಗಮನಹರಿಸಿಲ್ಲ’ ಎಂದವರು ದೂರಿದ್ದಾರೆ.
`ಈ ಭಾಗದಲ್ಲಿ 40ಕ್ಕೂ ಅಧಿಕ ರೆಸಾರ್ಟಗಳಿವೆ. ನಾನಾ ಭಾಗದ ಜನ ಇಲ್ಲಿಗೆ ಬರುತ್ತಾರೆ. ಸರಿಯಾದ ಸೂಚನಾ ಫಲಕ ಇಲ್ಲದ ಕಾರಣ ಅವರು ಸಮಸ್ಯೆ ಅನುಭವಿಸುತ್ತಿದ್ದು, ಅಪಘಾತದಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಹಿಂದಿನ ಸಿಪಿಐ ತಿಮ್ಮಪ್ಪ ನಾಯ್ಕ ಅವರಿಗೆ ಸಹ ಮನವರಿಕೆ ಮಾಡಲಾಗಿದ್ದು, ಅವರು ಯಾವುದೇ ಕ್ರಮ ಜರುಗಿಸಿರಲಿಲ್ಲ’ ಎಂದು ಆಗ್ನೇಲ್ ರೋಡ್ರಿಗ್ಸ ದೂರಿದ್ದಾರೆ. `ಈ ರಸ್ತೆಗೆ ಅಗತ್ಯವಿರುವ ಕಡೆ ನಾಮಫಲಕ ಅಳವಡಿಸದೇ ಇದ್ದಲ್ಲಿ ರಸ್ತೆ ತಡೆ ನಡೆಸಿ ಹೋರಾಟ ಮಾಡುವುದು ನಿಶ್ಚಿತ’ ಎಂದವರು ಎಚ್ಚರಿಸಿದ್ದಾರೆ.