ಉತ್ತರ ಕನ್ನಡ ಜಿಲ್ಲೆಯ ಸರ್ಕಾರಿ ಕಚೇರಿವೊಂದರ ಮೇಲೆ ಚೀನಾ ಆಕ್ರಮಣಕಾರರು ತಾಂತ್ರಿಕ ದಾಳಿ ನಡೆಸಿದ್ದಾರೆ. ಕಚೇರಿಯ ಕಂಪ್ಯುಟರ್’ಗಳನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದಾರೆ. ಕಿಡಿಗೇಡಿಗಳು ಇಲ್ಲಿನ ದಾಖಲೆಗಳನ್ನು ಅಪಹರಿಸಿದ ಅನುಮಾನ ಕಾಡುತ್ತಿದೆ.
ಹಳಿಯಾಳ ತಾಲೂಕು ಪಂಚಾಯತ ಕಚೇರಿಯ 19 ಕಂಪ್ಯುಟರ್’ಗಳು ಚೀನಾ ವೈರಸ್ ದಾಳಿಗೆ ತತ್ತರಿಸಿದೆ. 2024ರ ಮೇ 2ರಿಂದ 7ರ ಅವಧಿಯಲ್ಲಿ ಈ ಕಂಪ್ಯುಟರ್’ಗಳ ಮೇಲೆ ವೈರಸ್ ದಾಳಿ ನಡೆದಿದೆ. ಸರ್ಕಾರಿ ಕಚೇರಿಯ ಕಂಪ್ಯುಟರ್ ಮೇಲೆ ವೈರಸ್ ದಾಳಿ ನಡೆದಿದನ್ನು `ಮಿನಿಸ್ಟ್ರಿ ಆಫ್ ಇಲೆಕ್ಟ್ರಾನಿಕ್ಸ್ ಮತ್ತು ಇನ್ಪಾರ್ಮೆಷನ್ ಟೆಕ್ನಾಲಜಿ’ಯವರು ದೃಢಪಡಿಸಿದ್ದಾರೆ.
`ಭಾರತೀಯ ಕಂಪ್ಯುಟರ್ ಎಮರ್ಜನ್ಸಿ ಟೀಂ’ನವರು ಈ ಬಗ್ಗೆ ತಾ ಪಂ ಕಚೇರಿಗೆ ಇ-ಮೇಲ್ ಮೂಲಕ ಮಾಹಿತಿ ನೀಡಿದ್ದಾರೆ. ಆದರೆ, ಹಳೆಯ ಮೇಲ್ ಐಡಿಗೆ ಇ-ಮೇಲ್ ಬಂದಿದ್ದರಿoದ ಹ್ಯಾಕ್ ಆದ ವಿಷಯ ಅಧಿಕಾರಿ-ಸಿಬ್ಬಂದಿಗೆ ಗೊತ್ತಾಗಿರಲಿಲ್ಲ. ಅದಾದ ನಂತರ 2024ರ ಅಗಸ್ಟ 22ರಂದು ಮಧ್ಯಾಹ್ನ 12.30ರ ವೇಳೆಗೆ ಜಿಲ್ಲಾ ಪಂಚಾಯತದ ಎನ್ ಐ ಸಿ ಅಧಿಕಾರಿಯೊಬ್ಬರು ಆಗಿನ ತಾ ಪಂ ಕಾರ್ಯನಿರ್ವಹಣಾಧಿಕಾರಿ ಪರಶುರಾಮ ಮಾರುತಿ ಗಸ್ತೆ ಅವರಿಗೆ ಫೋನ್ ಮಾಡಿದ್ದರು. ಆಗ ಅವರು ವೈರಸ್ ದಾಳಿ ಬಗ್ಗೆ ಮಾಹಿತಿ ನೀಡಿದ್ದಾರೆ. ಕಂಪ್ಯುಟರ್ ಹ್ಯಾಕ್ ಆಗಿರುವ ಬಗ್ಗೆ ಆ ನಂತರವೇ ತಾ ಪಂಸಿಬ್ಬಂದಿ-ಅಧಿಕಾರಿಗಳಿಗೆ ಗೊತ್ತಾಯಿತು. ಅದಾದ ನಂತರ ಕಂಪ್ಯುಟರ್ ಪೂರ್ತಿ ಬಂದ್ ಆಗಿದ್ದು, ಕೆಲಸ ಕಾರ್ಯಗಳಿಗೂ ತೊಂದರೆ ಉಂಟಾಗಿತ್ತು.
ಪರಿಶೀಲನೆ ನಡೆಸಿದಾಗ `CHINA Based CN Ips’ ಮೂಲಕ ಕಂಪ್ಯುಟರ್ ಹ್ಯಾಕ್ ಆಗಿರುವುದು ದೃಢವಾಗಿದೆ. ಕಂಪ್ಯುಟರ್ ಹ್ಯಾಕ್ ಆದ ಕಾರಣ ಏನು ಮಾಡಬೇಕು ಎಂದು ಗೊತ್ತಾಗದೇ ಇಷ್ಟು ದಿನಗಳ ಕಾಲ ಅಧಿಕಾರಿಗಳು ಮೌನವಾಗಿದ್ದರು. ಈ ವಿಷಯವನ್ನು ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಇದೀಗ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ `CHINA Based CN Ips’ ತಂತ್ರಾoಶದ ವಿರುದ್ಧ ತಾ ಪಂ ಕಾರ್ಯನಿರ್ವಹಣಾಧಿಕಾರಿ ಸತೀಶ್ ಆರ್ ಇದೀಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ದುಷ್ಕರ್ಮಿಗಳು ಯಾವ ಉದ್ದೇಶಕ್ಕಾಗಿ ಸರ್ಕಾರಿ ಕಂಪ್ಯುಟರ್ ಹ್ಯಾಕ್ ಮಾಡಿದರು? ಇದನ್ನು ಹೇಗೆ ಹ್ಯಾಕ್ ಮಾಡಿದರು? ಎಂಬುದು ರಹಸ್ಯವಾಗಿಯೇ ಉಳಿದಿದೆ. `ಹ್ಯಾಕ್ ಆಗಿದ್ದು ಸತ್ಯ. ಅದಕ್ಕಾಗಿ ಪೊಲೀಸ್ ದೂರು ನೀಡಲಾಗಿದೆ. ಮೇಲ್ ಐಡಿ ಹಾಗೂ ಕಂಪ್ಯುಟರ್ ಪಾಸ್‌ವರ್ಡ ಬದಲಿಸಲಾಗಿದೆ. ಎಲ್ಲವನ್ನು ರಿಸ್ಟೋರ್ ಮಾಡಿದ್ದರಿಂದ ಮೊದಲಿನಂತೆ ಕೆಲಸ ನಡೆಯುತ್ತಿದೆ. ಈ ಬಗ್ಗೆ ಪೊಲೀಸ್ ದೂರು ದಾಖಲಿಸಲಾಗಿದ್ದು, ತನಿಖೆ ನಂತರ ಸತ್ಯ ಗೊತ್ತಾಗಲಿದೆ’ ಎಂದು ಹಳಿಯಾಳ ತಾ ಪಂ ಕಾರ್ಯನಿರ್ವಹಣಾಧಿಕಾರಿ ಸತೀಶ್ ಆರ್ ತಿಳಿಸಿದರು.