ಕುಮಟಾ: ಬರ್ಗಿಯ ಸಂಕೇತ ನಾಯ್ಕ ಟಿಪ್ಪರ್ ಖರೀದಿಗಾಗಿ ಅದೇ ಊರಿನ ರವಿಕುಮಾರ ನಾಯ್ಕ ಎಂಬಾತರಿಗೆ 6.20 ಲಕ್ಷ ರೂ ಹಣ ನೀಡಿದ್ದು, ಭದ್ರತೆಗೆ ನೀಡಿದ ಚೆಕ್ ದುರುಪಯೋಗವಾದ ಕಾರಣ ಕೋರ್ಟು-ಕಚೇರಿ ಅಲೆದಾಟ ನಡೆಸುತ್ತಿದ್ದಾರೆ.
ಸಂಕೇತ ನಾಗೇಶ ನಾಯ್ಕ ಅವರು ರವಿಕುಮಾರ ಪಾಂಡುರoಗ ನಾಯ್ಕ ಅವರಲ್ಲಿ ಟಿಪ್ಪರ್ ಖರೀದಿಯ ಮಾತುಕಥೆ ನಡೆಸಿದ್ದರು. ಈ ವೇಳೆ ಭದ್ರತೆಗಾಗಿ ಎರಡು ಖಾಲಿ ಚೆಕ್ ಮೇಲೆ ಮೊತ್ತ ನಮೂದಿಸದೇ ಸಹಿ ಮಾಡಿ ಕೊಟ್ಟಿದ್ದರು. ಫೆ 22ರಂದು 6.20 ಲಕ್ಷ ರೂ ಹಣವನ್ನು ನೆಪ್ಟ ಮೂಲಕ ರವಿಕುಮಾರರ ಖಾತೆಗೆ ವರ್ಗಾಯಿಸಿದ್ದರು. ಉಳಿದ ಹಣವನ್ನು ನಗದು ರೂಪದಲ್ಲಿ ನೀಡಿದ್ದರು.
ಹಣ ಪಾವತಿ ಆದ ನಂತರ ರವಿಕುಮಾರ್ ಚೆಕ್ ಮರಳಿಸಿರಲಿಲ್ಲ. ಚೆಕ್ ಮರಳಿಸುವಂತೆ ನೋಟಿಸ್ ನೀಡಿದರೂ ಪ್ರತಿಕ್ರಿಯಿಸಿರಲಿಲ್ಲ. ಇದಾದ ಮೇಲೆ ಚೆಕ್ 5.5 ಲಕ್ಷ ರೂ ಹಣ ನಮೂದಿಸಿ ಅದನ್ನು ಬ್ಯಾಂಕಿಗೆ ಜಮಾ ಮಾಡಿದ್ದು ಅದು ನಗದು ಆಗಿರಲಿಲ್ಲ. ಇನ್ನೊಂದು ಚೆಕ್’ನ್ನು ಬೆಂಗಳೂರಿನ ಧರ್ಮಶೇಖರ ಬಸವಣ್ಣಯ್ಯ ಎಂಬಾತರ ಹೆಸರಿಗೆ ನೀಡಿ ಅದರಲ್ಲಿ ಸಹ 5.75 ಲಕ್ಷ ರೂ ಎಂದು ನಮೂದಿಸಿದ್ದು ಅದೂ ಸಹ ನಗದಾಗಿರಲಿಲ್ಲ.
ಅದಾದ ನಂತರ ರವಿಕುಮಾರ ಹಾಗೂ ಧರ್ಮಶೇಖರ ಬಸವಣ್ಣಯ್ಯ ಇಬ್ಬರೂ ಚೆಕ್ ಅಮಾನ್ಯವಾಗಿರುವುದನ್ನು ಉಲ್ಲೇಖಿಸಿ ನೋಟಿಸ್ ನೀಡಿದ್ದಾರೆ. `ಕೈಗಡ ಪಡೆದಿದ್ದ ಹಣ ಮರಳಿಸಬೇಕು’ ಎಂದು ನೋಟಿಸ್ಸಿನಲ್ಲಿ ಹೇಳಿದ್ದಾರೆ. ಟಿಪ್ಪರ್ ಖರೀದಿಗಾಗಿ ತಾನೂ ನೀಡಬೇಕಾದ ಎಲ್ಲಾ ಹಣ ನೀಡಿದ ನಂತರವೂ ಚೆಕ್ ದುರುಪಯೋಗಪಡಿಸಿಕೊಂಡವರ ವಿರುದ್ಧ ಸಂಕೇತ ನಾಯ್ಕ ಪೊಲೀಸ್ ದೂರು ನೀಡಿದ್ದಾರೆ.