ಅoಕೋಲಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಭಾರೀ ಪ್ರಮಾಣದ ತ್ಯಾಜ್ಯ ಬೀಳುತ್ತಿದ್ದು, ಹೆದ್ದಾರಿ ಹೊಂಡದ ಜೊತೆ ತ್ಯಾಜ್ಯದ ದುರ್ವಾಸನೆ ಸಹಿಸಿಕೊಂಡು ಪ್ರಯಾಣಿಕರು ಮುಂದೆ ಸಾಗುತ್ತಿದ್ದಾರೆ.
ಅಂಕೋಲಾ ಹಾರವಾಡ ಬಳಿ ಗುರುವಾರ ರಾಶಿ ರಾಶಿ ಪ್ರಮಾಣದಲ್ಲಿ ಸೀಯಾಳ (ಬೊಂಡ)ದ ಚಿಪ್ಪುಗಳು ಕಾಣಿಸಿದವು. ಕಳೆದ ವಾರ ಸಹ ಇದೇ ಪ್ರಮಾಣದಲ್ಲಿ ಸೀಯಾಳದ ಚಿಪ್ಪು ಕಂಡಿದ್ದು, ಅದಕ್ಕೆ ಆದ ಹುಳಗಳಿಂದ ಅಕ್ಕಪಕ್ಕದ ಜನ ಸಮಸ್ಯೆ ಅನುಭವಿಸಿದ್ದರು. ಸೀಯಾಳ ಮಾರಾಟ ಮಾಡುವವರೇ ಈ ಕೃತ್ಯ ಎಸಗಿರುವ ಬಗ್ಗೆ ಜನ ದೂರುತ್ತಿದ್ದಾರೆ. ರಾಶಿ ರಾಶಿ ಸಿಪ್ಪೆಗಳನ್ನು ಹೆದ್ದಾರಿ ಪಕ್ಕ ವಿಲೇವಾರು ಮಾಡುತ್ತಿರುವುದರಿಂದ ಕೆಲ ಪ್ರಾಣಿಗಳು ಅವನ್ನು ರಸ್ತೆಗೆ ತಂದು ಹಾಕುತ್ತಿವೆ. ಇದರಿಂದ ನೆಲಕ್ಕೆ ಬಿದ್ದು ಬೈಕ್ ಸವಾರರು ಗಾಯಗೊಂಡಿದ್ದಾರೆ. ಒಂದೆರಡು ಬಾರಿ ಹೀಗೆ ರಸ್ತೆ ಪಕ್ಕ ತ್ಯಾಜ್ಯ ಎಸೆಯುವವರನ್ನು ಜನರೇ ಹಿಡಿದು ಬೈದು ಕಳುಹಿಸಿದ್ದಾರೆ. ಆದರೂ, ತ್ಯಾಜ್ಯ ಎಸೆಯುವವರ ಸಂಖ್ಯೆ ಕಡಿಮೆ ಆಗಿಲ್ಲ.
`ಪ್ರಸ್ತುತ ಹೆದ್ದಾರಿ ಪಕ್ಕ ಬಿದ್ದ ತ್ಯಾಜ್ಯಗಳನ್ನು ಸ್ಥಳೀಯ ಸಂಸ್ಥೆಯವರು ತೆರವು ಮಾಡಬೇಕು. ಜೊತೆಗೆ ಇನ್ಮುಂದೆ ವ್ಯಾಪಾರಸ್ಥರು ಈ ರೀತಿ ವರ್ತಿಸದಂತೆ ಎಚ್ಚರಿಕೆ ನೀಡಬೇಕು’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಆಗ್ನೇಲ್ ರೋಡ್ರಿಗ್ಸ ಒತ್ತಾಯಿಸಿದ್ದಾರೆ. `ಹೆದ್ದಾರಿ ಪಕ್ಕ ಬಿದ್ದ ಬೊಂಡದ ಚಿಪ್ಪಿನಲ್ಲಿ ಮಳೆ ನೀರು ತುಂಬಿ ಸೊಳ್ಳೆಗಳು ಉತ್ಪಾದನೆಯಾಗಿದೆ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ವಿವರಿಸಿದರು.