ಕುಮಟಾ: `ಗುಡ್ಡಗಾಡು ಪ್ರದೇಶವಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಕ್ಷೇತ್ರದಲ್ಲಿ ಆಶ್ರಯ ಪಡೆದವರಿಗೆ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟವರು ಬಂಗಾರಪ್ಪ ಅವರು’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ಮಾಸ್ತಿಕಟ್ಟಾ ದೇವಸ್ಥಾನ ಸಂಭಾಗಣದಲ್ಲಿ ಜರುಗಿದ ತಾಲೂಕಾ ಮಟ್ಟದ ಅರಣ್ಯ ಅತಿಕ್ರಮಣದಾರರ ಸಭೆಯಲ್ಲಿ ಬಂಗಾರಪ್ಪನವರ 92ನೇ ಹುಟ್ಟು ಹಬ್ಬ ಆಚರಿಸಿ ಅವರು ಮಾತನಾಡಿದರು. `ವಿದ್ಯಾರ್ಥಿ ಜೀವನದಿಂದಲೇ ಬಂಗಾರಪ್ಪನವರ ಸಾಮಾಜಿಕ ಚಟುವಟಿಕೆ ಪ್ರೇರಣೆಯಿಂದ ಶೋಷಿತ ವರ್ಗದ ಧ್ವನಿಯಾಗಿ ಕಾರ್ಯನಿರ್ವಹಿಸಿದ್ದರು. ಅವರು ಮುಖ್ಯಮಂತ್ರಿ ಆದಾಗ ಅರಣ್ಯ ಭೂಮಿಯಲ್ಲಿ ಆಶ್ರಯ ಪಟ್ಟ ನೀಡಿದ್ದರು’ ಎಂದರು. `ಆಡಳಿತಾತ್ಮಕವಾಗಿ ಜನಪರ ನಿಲುವಿಗೆ ಕಾನೂನಿನ ತೊಂದರೆ ಇದ್ದಾಗಲೂ ಅರಣ್ಯ ಭೂಮಿ ಆಶ್ರಯ ಪಟ್ಟ ನೀಡುವಿಕೆ, ಕಾವೇರಿ ನೀರಿನ ಸಮಸ್ಯೆ ಅರಿತು ರೈತರಿಗೆ ಉಚಿತ ವಿದ್ಯುತ್ ನೀಡಿರುವದು ಬಂಗಾರಪ್ಪ ಅವರ ಸಾಧನೆ’ ಎಂದರು.
ಒಕ್ಕಲೆಬ್ಬಿಸುವ ಕಾರ್ಯಕ್ಕೆ ಅತಿಕ್ರಮಣದಾರರ ವಿರೋಧ
`ಅರಣ್ಯ ಸಾಗುವಳಿ ಕ್ಷೇತ್ರದಲ್ಲಿ ಅನಾದಿಕಾಲದಿಂದಲೂ ಇರುವ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವ ಅಧಿಕಾರ ಅಧಿಕಾರಿಗಳಿಗೆ ಇಲ್ಲ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಮಿರ್ಜಾನ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಅರಣ್ಯವಾಸಿಗಳ ಕಾನೂನಾತ್ಮಕ ಸಮಸ್ಯೆಗಳ ಕುರಿತು ಅರಣ್ಯವಾಸಿಗಳಲ್ಲಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು `ಅರಣ್ಯ ಹಕ್ಕು ಕಾಯಿದೆಯು ಅರಣ್ಯವಾಸಿಗೆ ಭದ್ರತೆ ಮತ್ತು ರಕ್ಷಣೆಯನ್ನು ನೀಡಿದೆ ಅರ್ಜಿ ತೀರ್ಮಾನ ಆಗುವರೆಗೂ ಅತಿಕ್ರಮಣದಾರರಿಗೆ ಯಾವುದೇ ಸಮಸ್ಯೆಗಳನ್ನು ಮಾಡಲು ಅರಣ್ಯವಾಸಿಗಳಿಗೆ ಕಾನೂನಿನಲ್ಲಿ ಅವಕಾಶವಿಲ್ಲ’ ಎಂದರು.
ಸoಘಟನೆಯ ಜಿಲ್ಲಾ ಸಂಚಾಲಕ ರಾಜೇಶ ಮಿತ್ರ ನಾಯ್ಕ, ಜಗದೀಶ ಹರಿಕ್ರಂತ ಮಾತನಾಡಿದರು. ಯಾಕುಬ ಬೆಟ್ಕುಳಿ, ಮೋಹನ ಪಟಗಾರ, ಸಾರಂಬಿ ಶೇಕ್ ಮುಂತಾದವರು ಉಪಸ್ಥಿತರಿದ್ದರು. ಸಂಘಟನೆಯ ತಾಲೂಕಾ ಅಧ್ಯಕ್ಷ ಮಂಜುನಾಥ ಮರಾಠಿ ಸ್ವಾಗತಿಸಿದರು.