ಅಂಕೋಲಾ: ATM ಕೇಂದ್ರದ ಒಳಗೆ ಅಪರಿಚಿತರ ಮಾತು ನಂಬಿದ ಮಹಿಳೆಯೊಬ್ಬರು ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ 40 ಸಾವಿರ ರೂ ಹಣ ಕಳೆದುಕೊಂಡಿದ್ದಾರೆ.
ಹಟ್ಟಿಕೇರಿ ಸಕಲಬೇಣದ ಸುರೇಕಾ ಸುಧೀರ ನಾಯ್ಕ (50) ಅವರು SBI ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರು. ಎಟಿಎಂ ಸೌಲಭ್ಯವನ್ನು ಪಡೆದಿದ್ದ ಅವರು ಅಕ್ಟೊಬರ್ 22ರಂದು ಮಧ್ಯಾಹ್ನ ಕೆಸಿ ರಸ್ತೆಯಲ್ಲಿರುವ ಎಟಿಎಂ ಕೇಂದ್ರಕ್ಕೆ ಹೋಗಿದ್ದರು. ಅಲ್ಲಿ ತನ್ನ ಮಾವನ ಮಗನಾದ ಕೇಣಿಯ ರಾಜು ನಾರಾಯಣ ನಾಯ್ಕ ನೆರವಿನಿಂದ ಹಣ ಪಡೆದಿದ್ದರು. ಅದಾದ ನಂತರ ಫಾಸ್ಬುಕ್ ಎಂಟ್ರಿ ಮಾಡಿಸಿ, ಮನೆಗೆ ಮರಳಿದ್ದರು.
ಮರುದಿನ ಮತ್ತೆ ಹಣ ಅಗತ್ಯವಿರುವುದಕ್ಕಾಗಿ ಎಟಿಎಂ ಕೇಂದ್ರಕ್ಕೆ ತೆರಳಿದಾಗ ಹಣ ಬರಲಿಲ್ಲ. ಈ ಬಗ್ಗೆ ಬ್ಯಾಂಕ್ ಸಿಬ್ಬಂದಿ ಪ್ರಶ್ನಿಸಿದಾಗ `ಖಾತೆಯಲ್ಲಿ ಹಣವಿಲ್ಲ’ ಎಂದಿದ್ದರು. ತನ್ನ ಖಾತೆಯಲ್ಲಿ 40 ಸಾವಿರ ರೂ ಹಣವಿರುವ ಬಗ್ಗೆ ಸುರೇಕಾ ಫಾಸ್ಬುಕ್ ಸಾಕ್ಷಿ ನೀಡಿದ್ದರು. ಪರಿಶೀಲಿಸಿದ ಬ್ಯಾಂಕ್ ಸಿಬ್ಬಂದಿ `ಎಟಿಎಂ ಮೂಲಕ ಆ ಹಣವನ್ನು ಪಡೆಯಲಾಗಿದೆ’ ಎಂದು ಸ್ಟೇಟ್‌ಮೆಂಟ್ ನೀಡಿದ್ದರು.
ಫಾಸ್ಬುಕ್ ಮುದ್ರಣದ ವೇಳೆ ಅಪರಿಚಿತನೊಬ್ಬ ಬಂದು ಸಹಾಯ ಮಾಡುವ ನೆಪದಲ್ಲಿ ಎಟಿಎಂ ಪಡೆದಿದ್ದು ಆಗ ಅವರಿಗೆ ನೆನಪಾಗಿದೆ. `ಅಪರಿಚಿತ ವ್ಯಕ್ತಿ ತನ್ನ ಎಟಿಎಂ ಎಗರಿಸಿ ಅದೇ ಬಗೆಯ ಇನ್ನೊಂದು ಎಟಿಎಂ ನೀಡಿದ್ದಲ್ಲದೇ, ಹಣ ಪಡೆದು ವಂಚಿಸಿದ್ದಾನೆ’ ಎಂದು ಸುರೇಕಾ ಪೊಲೀಸ್ ದೂರು ನೀಡಿದ್ದಾರೆ.