ದಟ್ಟ ಕಾಡಿನ ನಡುವೆ ಪುಟ್ಟ ಪುಟ್ಟ ಗುಡಿಸಲು ನಿರ್ಮಿಸಿಕೊಂಡು ವಾಸಿಸುವ ಸಿದ್ದಿ ಜನ ಎಂದಿಗೂ ತಮ್ಮ ಪರಂಪರೆಯನ್ನು ಬಿಟ್ಟುಕೊಟ್ಟಿಲ್ಲ. ಡಮಾಮಿ ನೃತ್ಯ, ಪೊಗಡಿ ಕುಣಿತ ಸಿದ್ದಿ ಸಮಾಜದ ಸಂಸ್ಕೃತಿಯ ಪ್ರತಿಬಿಂಬ. ದೇಶದ ಯಾವ ಮೂಲೆಗೆ ಹೋದರೂ ಅವರು ಅಲ್ಲಿ ತಮ್ಮ ಕುಣಿತ ಪ್ರದರ್ಶಿಸದೇ ಮರಳುವುದಿಲ್ಲ. ತಮ್ಮ ಸಂಸ್ಕೃತಿ – ಪರಂಪರೆಯ ಬಗ್ಗೆ ಅವರಿಗೆ ಅಷ್ಟು ಅಭಿಮಾನ!
ಬುಡಕಟ್ಟು ಸಿದ್ದಿ ಸಮುದಾಯದ ಸಂಸ್ಕೃತಿಗಳಲ್ಲಿ ದಮಾಮಿ ಗಾಯನ ಹಾಗೂ ನೃತ್ಯವೂ ಒಂದು. ಬುಡಕಟ್ಟು ಸಮುದಾಯದವೇ ಅಧಿಕವಾಗಿರುವ ಯಲ್ಲಾಪುರ ಕಿರವತ್ತಿಯ ಬಳಿಯ ಬೈಲಂದೂರು ಶಾಲೆಗೆ ಮಂಗಳೂರಿನ ವನಚೇತನ ತಂಡದವರು ಮೇಜು-ಬೆಂಚುಗಳನ್ನು ಉಡುಗರೆಯಾಗಿ ನೀಡಿದ್ದು, ಇದರಿಂದ ಖುಷಿಯಾದ ಆ ಶಾಲೆಯ ಬುಡಕಟ್ಟು ಸಮುದಾಯದ ಸಿದ್ದಿ ಮಕ್ಕಳು ಅತಿಥಿಗಳನ್ನು ದಮಾಮಿ ನೃತ್ಯದ ಮೂಲಕ ಸ್ವಾಗತಿಸಿದರು. ಈ ವನ ಚೇತನ ತಂಡದವರು ಮಕ್ಕಳಿಗೆ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು.
ಸಿದ್ದಿ ಸಮುದಾಯದವರು ಆಫ್ರಿಕಾ ಮೂಲದವರು. ಅಲ್ಲಿಂದ ಇಲ್ಲಿಗೆ ಗುಲಾಮಾರಾಗಿ ಬಂದ ಅವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಯಲ್ಲಾಪುರ, ಹಳಿಯಾಳ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತಮ್ಮದೇ ಆದ ಗುಂಪುಗಳಲ್ಲಿ ವಾಸಿಸುವ ಅವರು ಮೂಲ ಸಂಸ್ಕೃತಿಯನ್ನು ಬಿಟ್ಟಿಲ್ಲ. ಸಿದ್ದಿ ಸಮುದಾಯದ ಜನ ಹಿಂದೂ, ಮುಸ್ಲಿಂ ಹಾಗೂ ಕ್ರಸ್ತ ಧರ್ಮದಲ್ಲಿ ಅವರು ಹಂಚಿ ಹೋಗಿದ್ದರೂ ಸಂಸ್ಕೃತಿ ಹಾಗೂ ಆಚರಣೆ ಬದಲಾಗಿಲ್ಲ.
ಸಿದ್ದಿ ಸಮುದಾಯದವರ ಉನ್ನತಿಗೆ ಸರ್ಕಾರ ಸಾಕಷ್ಟು ಪ್ರಯತ್ನ ನಡೆಸಿದೆ. ಆದರೆ, ಅದು ಕೆಲವರಿಗೆ ಮಾತ್ರ ತಲುಪುತ್ತಿದ್ದು, ಎಲ್ಲಾ ಅಡವಿ ಮಕ್ಕಳು ಅದನ್ನು ಪ್ರಶ್ನಿಸಿ ಪಡೆಯುವಷ್ಟು ಪ್ರಬುದ್ಧರಾಗಿಲ್ಲ. ಸರ್ಕಾರ ಅವರ ಸಂಸ್ಕೃತಿ-ಆಚರಣೆ ಉಳಿಸುವ ನಿಟ್ಟಿನಲ್ಲಿ ಹೆಚ್ಚಿನ ಆಸಕ್ತಿವಹಿಸದೇ ಇದ್ದರೂ ಸಮಾಜದ ಕಾಳಜಿಯಿಂದ ಡಮಾಮಿ ಹಾಗೂ ಪೊಗಡಿ ಈ ತಲೆಮಾರಿನವರಿಗೂ ಹಂಚಿಕೆಯಾಗಿದೆ.
ಡಮಾಮಿ ಗಾಯನ ಹಾಗೂ ನೃತ್ಯದ ಒಂದು ವಿಡಿಯೋ ಇಲ್ಲಿ ನೋಡಿ..