ಯಲ್ಲಾಪುರ: ಉಪನೊಂದಣಾಧಿಕಾರಿ ಕಚೇರಿಗೆ ಕೋಟಿ ರೂ ಆದಾಯವಿದ್ದರೂ ಅಲ್ಲಿನ ಅಧಿಕಾರಿಗಳಿಗೆ ವಿದ್ಯುತ್ ಬಿಲ್ ಪಾವತಿಗೆ ಮನಸಿಲ್ಲ. ಸರ್ಕಾರಿ ಖಜಾನೆಯಲ್ಲಿದ್ದ ಹಣವನ್ನು ಹೆಸ್ಕಾಂ ಕಚೇರಿಗೆ ಪಾವತಿಸುವಲ್ಲಿ ಸಹ ಅಧಿಕಾರಿಗಳು ಬೇಜವಾಬ್ದಾರಿ ಮೆರೆದಿದ್ದು, ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಮೂಲಕ ಹೆಸ್ಕಾಂ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಹೀಗಾಗಿ ವಿದ್ಯುತ್ ಸಂಪರ್ಕ ಮರುಜೋಡಣೆ ಆಗುವವರೆಗೂ ಉಪನೊಂದಣಾಧಿಕಾರಿ ಕಚೇರಿಯ ಯಾವುದೇ ಕೆಲಸಗಳು ನಡೆಯುವುದಿಲ್ಲ!
ಭೂಮಿ ಕ್ರಯ ಪತ್ರ ಸೇರಿ ವಿವಿಧ ನೊಂದಣಿಗಾಗಿ ಅನೇಕರು ಮಂಗಳವಾರ ನೊಂದಣಿಗೆ ಮುಹೂರ್ತ ಕಾಯ್ದಿರಿಸಿದ್ದರು. ಇದಕ್ಕಾಗಿ ಎಲ್ಲಾ ಬಗೆಯ ತಯಾರಿಯನ್ನು ಮಾಡಿಕೊಂಡಿದ್ದರು. ಆದರೆ, ವಿದ್ಯುತ್ ಸಂಪರ್ಕ ಕಡಿತವಾದ ಹಿನ್ನಲೆ ಸಾರ್ವಜನಿಕ ಕೆಲಸ ನಡೆಯದ ಬಗ್ಗೆ ನೊಂದಣಾಧಿಕಾರಿ ಕಚೇರಿಯವರು ಯಾರಿಗೂ ಮಾಹಿತಿ ನೀಡಿಲ್ಲ. ಬಾಕಿ ಹಣ ಪಾವತಿಸಲು ಆಸಕ್ತಿವಹಿಸಿಲ್ಲ. ಹೀಗಾಗಿ ವಿದ್ಯುತ್ ಸಂಪರ್ಕ ಮರು ಜೋಡಣೆ ಆಗಿಲ್ಲ. ಇದರಿಂದ ಬೇರೆ ಬೇರೆ ಊರುಗಳಿಂದ ಯಲ್ಲಾಪುರಕ್ಕೆ ಬಂದವರು ಇದೀಗ ಮನೆಗೆ ಮರಳಬೇಕಿದೆ.
ಹೆಸ್ಕಾಂ ಮೃದು ದೋರಣೆ
ಕಳೆದ ಆರು ತಿಂಗಳಿನಿoದ ಉಪನೊಂದಣಿ ಕಚೇರಿಯವರು ವಿದ್ಯುತ್ ಬಿಲ್ ಪಾವತಿಸಿರಲಿಲ್ಲ. ಅಂದಾಜು 30 ಸಾವಿರ ರೂ ಬಾಕಿಯಿದ್ದು, ಅದನ್ನು ಪಾವತಿಸುವಂತೆ ಹೆಸ್ಕಾಂ ಅಧಿಕಾರಿಗಳು ಮನವಿ ಮಾಡುತ್ತಿದ್ದರು. `ಇಂದು – ನಾಳೆ’ ಎಂಬ ಹೇಳಿಕೆ ಮನ್ನಿಸಿ ಹೆಸ್ಕಾಂ’ನವರು ಮೃದು ದೋರಣೆ ಅನುಸರಿಸಿದ್ದರು. ಅದಾಗಿಯೂ ಕೊನೆಯದಾಗಿ ಸೋಮವಾರ ಸಂಜೆಯವರೆಗೂ ವಿದ್ಯುತ್ ಬಿಲ್ ಪಾವತಿಗೆ ಸಮಯ ನೀಡಿದ್ದರು. ಆದರೂ, ಉಪನೊಂದಣಾಧಿಕಾರಿ ಕಚೇರಿಯವರು ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಅವರು ವಿದ್ಯುತ್ ಸಂಪರ್ಕ ಕಡಿತ ಮಾಡಿದರು. `ಜನರಿಗೆ ಸಮಸ್ಯೆ ಮಾಡುವ ಉದ್ದೇಶ ನಮಗಿಲ್ಲ. ಆದರೆ, ಅಧಿಕಾರಿಗಳು ಜವಾಬ್ದಾರಿಯಿಂದ ವರ್ತಿಸಬೇಕು. ಈ ನಿಟ್ಟಿನಲ್ಲಿ ಕಾನೂನು ಕ್ರಮ ಜರುಗಿಸಿದ್ದೇವೆ’ ಎಂದು ಹೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದರು.
ತೋಟಗಾರಿಕಾ ಸಂಪರ್ಕವೂ ಕಡಿತ: ಜನರಿಗೆ ಸಮಸ್ಯೆ ಇಲ್ಲ!
ತೋಟಗಾರಿಕಾ ಇಲಾಖೆ ಸಹ 2 ಲಕ್ಷ ರೂ ವಿದ್ಯುತ್ ಬಾಕಿ ಇರಿಸಿಕೊಂಡಿದ್ದು, ತೋಟಗಾರಿಕಾ ಇಲಾಖೆಯ ವಿದ್ಯುತ್ ಸಂಪರ್ಕವನ್ನು ಹೆಸ್ಕಾಂ ಅಧಿಕಾರಿಗಳು ಕಡಿತಗೊಳಿಸಿದ್ದಾರೆ. ಆದರೆ, ಇದರಿಂದ ಜನರಿಗೆ ಯಾವುದೇ ಸಮಸ್ಯೆ ಇಲ್ಲ.
ಚೆಕ್ ನೀಡಿ ತಪ್ಪಿಸಿಕೊಂಡ ಪ್ರಿನ್ಸಿಪಾಲ್
ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಹೆಸ್ಕಾಂ ಸಿಬ್ಬಂದಿ ತೆರಳಿದ್ದರು. ಇದನ್ನು ಅರಿತ ಅಲ್ಲಿನ ಪ್ರಾಚಾರ್ಯರು ಆ ಕ್ಷಣದಲ್ಲಿಯೇ ಚೆಕ್ ಮೂಲಕ ಹಣ ಪಾವತಿಸಿದರು. ಈ ವೇಳೆ ಕಾಲೇಜಿನಲ್ಲಿ ಕಂಪ್ಯುಟರ್ ಪರೀಕ್ಷೆ ನಡೆಯುತ್ತಿತ್ತು. ವಿದ್ಯುತ್ ಸಂಪರ್ಕ ಕಡಿತವಾದಲ್ಲಿ ಪರೀಕ್ಷೆ ಎದುರಿಸುತ್ತಿದ್ದ ಎಲ್ಲಾ ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕುತ್ತಿದ್ದರು. ಇದನ್ನು ಅರಿತ ಪ್ರಾಚಾರ್ಯ ಆರ್ ಡಿ ಜನಾರ್ಧನ್ ಅವರು ತಕ್ಷಣ ಅನುಮತಿ ಪಡೆದು 50 ಸಾವಿರ ರೂ ಮೌಲ್ಯದ ಚೆಕ್ ವಿತರಿಸಿದರು.



