ಶಿರಸಿ: ಐದು ರಸ್ತೆಯ ಬಳಿ ಎರಡು ಗುಂಪಿನ ನಡುವೆ ನಡೆದ ಹೊಡೆದಾಟಕ್ಕೆ ಸಂಬoಧಿಸಿ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿದ್ದು, ಈ ನಡುವೆ ಹೊಡೆದಾಟದ ವಿಡಿಯೋ ಹರಿದಾಡುತ್ತಿದೆ.
ಅಕ್ಟೊಬರ್ 27ರ ಸಂಜೆ 6.45ರ ಆಸುಪಾಸಿಗೆ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ. ಇದಕ್ಕೆ ಸಂಬoಧಿಸಿ ಅರ್ಜುನ ಕಾಂತು ಎಂಬಾತರು ಪ್ರಥ್ವಿ ನಾರ್ವೇಕರ್ ಎಂಬಾತರ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ. ಇದರೊಂದಿಗೆ ಪ್ರಥ್ವಿ ನಾರ್ವೇಕರ್ ಸಹ ಅರ್ಜುನ್ ಕಾಂತು ಜೊತೆ ಮತ್ತೆ ಇಬ್ಬರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.
`ಪ್ರಥ್ವಿ ನಾರ್ವೇಕರ್ ಹಾಗೂ ಸಹಚಚರು ಸೇರಿ ಸ್ಕ್ರೂ ಡ್ರೈವರ್’ನಿಂದ ಕುತ್ತಿಗೆ ಬಳಿ ಚುಚ್ಚಿದ್ದಾರೆ’ ಎಂದು ಅರ್ಜುನ ಕಾಂತು ಆರೋಪಿಸಿದ್ದಾರೆ. `ಅರ್ಜುನ ಕಾಂತು ಜೊತೆ ಮೋಹನ ಪೂಜಾರಿ, ಸುನೀಲ ಕಂಬಳಿ ಸೇರಿ ಖಡ್ಗ ಮತ್ತು ರಾಡಿನಿಂದ ಹಲ್ಲೆ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಪ್ರಥ್ವಿ ನಾರ್ವೇಕರ್ ದೂರಿದ್ದಾರೆ.
ಈ ಎರಡು ದೂರುದಾರರು `ತಮಗೆ ಜೀವ ಬೆದರಿಕೆಯಿದೆ’ ಎಂದು ಲಿಖಿತವಾಗಿ ತಿಳಿಸಿ ಪೊಲೀಸರ ಮೊರೆ ಹೋಗಿದ್ದಾರೆ. ಅರ್ಜುನ ಕಾಂತೂ ಶಿರಸಿಯ ನಟರಾಜ ರಸ್ತೆ ಕಡೆಯವರು. ಪ್ರಥ್ವಿ ಮನೋಜ ನಾರ್ವೇಕರ್ ವಿವೇಕಾನಂದ ನಗರದವರು. ಈ ಇಬ್ಬರ ನಡುವೆ ಹಳೆಯ ದ್ವೇಷದ ಕಾರಣದಿಂದ ಈ ಹೊಡೆದಾಟ ನಡೆದ ಬಗ್ಗೆ ಅನುಮಾನಗಳಿವೆ.
ಐದು ಜನ ಸೇರಿ ಒಬ್ಬನನ್ನು ಥಳಿಸಿದ ವಿಡಿಯೋ ವೈರಲ್ ಆಗಿದ್ದು, ಈ ನಡುವೆ ಇಬ್ಬರು ಹೊಡೆದಾಟ ತಪ್ಪಿಸಲು ಬಂದಿದ್ದಾರೆ. ಈ ವೇಳೆ ಅವರ ನಡುವೆಯೂ ತಳ್ಳಾಟ ನಡೆದಿದೆ. ವ್ಯಕ್ತಿಯೊಬ್ಬನ ಬಟ್ಟೆ ಹರಿದು ನೆಲಕ್ಕೆ ಬೀಳಿಸಿ ಆತನಿಗೆ ಥಳಿಸಿದ ವಿಡಿಯೋ ಎಲ್ಲಡೆ ಹರಿದಾಡುತ್ತಿದೆ.



