ಯಲ್ಲಾಪುರ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಪ್ರತಿಯೊಬ್ಬ ಫಲಾನುಭವಿಗೂ ತಲುಪಿಸಲು ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ಉಲ್ಲಾಸ ಶಾನಭಾಗ ಸಾಕಷ್ಟು ಶ್ರಮಿಸುತ್ತಿದ್ದಾರೆ. ಆದರೆ, ಅವರಿಗಿರುವ ಕಾಳಜಿ ಹಾಗೂ ಕನಿಕರ ಅಧಿಕಾರಿಗಳಿಗೆ ಇಲ್ಲ!
ಮಂಗಳವಾರ ತಾ ಪಂ ಸಭಾ ಭವನದಲ್ಲಿ ಗ್ಯಾರಂಟಿ ಸಮಿತಿಯ ಸಭೆ ನಡೆಯಿತು. ಈ ಸಭೆಯಲ್ಲಿ ಅಧ್ಯಕ್ಷರು ಮಾತನಾಡುವಾಗ ಒಬ್ಬರೇ ಒಬ್ಬ ಅಧಿಕಾರಿಗಳು ಭಾಗವಹಿಸಿರಲಿಲ್ಲ. ನಾಲ್ಕು ದಿನ ಮೊದಲೇ ಅಧಿಕಾರಿಗಳಿಗೆ ಸಭೆಗೆ ಆಗಮಿಸುವ ಬಗ್ಗೆ ಆಮಂತ್ರಿಸಲಾಗಿತ್ತು. ಆದರೆ, ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳ ಅನುಷ್ಠಾನ ಸಭೆಗೆ ಬರಲು ಅಧಿಕಾರಿಗಳು ಆಸಕ್ತರಾಗಿರಲಿಲ್ಲ. `ಒಬ್ಬರು ತಾನು ಕಾರವಾರಕ್ಕೆ ಹೋಗಬೇಕು’ ಎಂದು ಬರಲಿಲ್ಲ. ಇನ್ನೊಬ್ಬರು `ಕಿರವತ್ತಿಗೆ ಹೋಗಬೇಕು’ ಎಂಬ ಕಾರಣ ನೀಡಿದರು. ಅಧಿಕಾರಿಗಳಿಗೆ ಆಮಂತ್ರಣ ನೀಡಿದ್ದ ಸಮಿತಿ ಸದಸ್ಯ ಕಾರ್ಯದರ್ಶಿಯೂ ಆದ ತಾ ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜೇಶ ಧನವಾಡಕರ್ ಸಹ ಅಧ್ಯಕ್ಷರ ಭಾಷಣದ ವೇಳೆ ಅಲ್ಲಿರಲಿಲ್ಲ. `ಜಿಲ್ಲಾ ಪಂಚಾಯತ ಅಧಿಕಾರಿಗಳು ಬಂದಿದ್ದಾರೆ’ ಎಂದು ಹೇಳಿ ಅವರು ಅಲ್ಲಿಂದ ತಪ್ಪಿಸಿಕೊಂಡರು!
ಸಭೆ ಶುರುವಾಗುವ ಮುನ್ನ ಅಧ್ಯಕ್ಷರನ್ನು ಒಳಗೊಂಡು 8 ಜನ ಗ್ಯಾರಂಟಿ ಸಮಿತಿ ಸದಸ್ಯರಿದ್ದರು. ಅದರಲ್ಲಿ ಒಬ್ಬರು `ಫೋನ್ ಬಂತು’ ಎಂದು ಅಲ್ಲಿಂದ ಹೊರಬಿದ್ದರು. ಹೊರಡುವ ಮುನ್ನ ಎಲ್ಲರೂ ಸೇರಿ ಸಭೆಗೆ ಹಾಜರಾದ ಸಾಕ್ಷಿಗಾಗಿ ಫೋಟೋ ತೆಗೆಸಿಕೊಂಡರು. ಕೊನೆಗೆ ಮೂವರು ಪತ್ರಕರ್ತರು, ಐವರು ಗ್ಯಾರಂಟಿ ಸಮಿತಿ ಸದಸ್ಯರು ಮಾತ್ರ ಸಭೆಯಲ್ಲಿದ್ದು 40ಕ್ಕೂ ಅಧಿಕ ಖಾಲಿ ಖುರ್ಚಿಗಳ ಮುಂದೆ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಲ್ಲಾಸ ಶಾನಭಾಗ್ ಸುದೀರ್ಘ ಭಾಷಣ ಮಾಡಿದರು. ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ಮಾಡಿದ ಸಾಧನೆಯ ಬಗ್ಗೆ ಅವರು ಕೊಂಡಾಡಿದರು.
ಹೆಸ್ಕಾಂ, ಕೆಎಸ್‌ಆರ್‌ಟಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧೀನದ ಶಿಶು ಅಭಿವೃದ್ಧಿ, ಆಹಾರ ಇಲಾಖೆ ಹಾಗೂ ಕೌಶಲ್ಯ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಈ ಸಭೆಗೆ ಹಾಜರಾಗಬೇಕಿತ್ತು. ಅದರ ಜೊತೆ ಗ್ಯಾರಂಟಿ ಸಮಿತಿಯ ಸದಸ್ಯರು ಸಭೆಯಲ್ಲಿರಬೇಕಿತ್ತು. ಆದರೆ, ಫೋನ್ ಬಂದಾಗ ಎದ್ದು ಹೋದವರನ್ನು ಸೇರಿ ಸಮಿತಿಯ ಟಿಸಿ ಗಾಂವ್ಕರ್, ಬಾಬಾ ಜಾನ್ ಶೇಖ್, ಅನಿಲ ಮರಾಠೆ, ಪಕೀರ ಶಿವಪ್ಪ ಹರಿಜನ, ಮುಶ್ರತ್ ಶೇಖ್, ಅನಂತ ಕೋಟೆಮನೆ ಸಭೆಯಲ್ಲಿದ್ದರು.
`ಗ್ಯಾರಂಟಿ ಸಮಿತಿ ಸಭೆಗೆ ಅಧಿಕಾರಿಗಳು ಗೈರಾಗುತ್ತಿರುವುದು ಇದೇ ಮೊದಲು. ಅದಾಗಿಯೂ ಕೆಲ ಇಲಾಖೆಯವರು ಸಭೆ ಮುಗಿದ ನಂತರ ತಮ್ಮ ಇಲಾಖೆ ಪ್ರಗತಿ ಬಗ್ಗೆ ವರದಿ ಸಲ್ಲಿಸಿದ್ದಾರೆ. ಮುಂದಿನ ಸಭೆಗೆ ಗೈರಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡುವೆ. ಫಲಾನುಭವಿಗಳಿಗೆ ತೊಂದರೆ ಆಗಲು ಬಿಡುವುದಿಲ್ಲ’ ಎಂದು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಲ್ಲಾಸ ಶಾನಭಾಗ ಸಮಜಾಯಿಶಿ ನೀಡಿದರು.
ಗ್ಯಾರಂಟಿ ಅನುಷ್ಠಾನ ಸಭೆ ಹೇಗಾಯ್ತು? ಅಧ್ಯಕ್ಷರು ಏನೆಂದರು? ವಿಡಿಯೋ ಇಲ್ಲಿ ನೋಡಿ..